ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರು ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರೆಯ ಮೇರೆಗೆ ನಡೆದ ಈ ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಸದಸ್ಯರು ಭಾಗವಹಿಸಿ, ನ್ಯಾಯಾಲಯದ ಕಲಾಪಗಳಿಂದ ಒಂದು ದಿನದ ಮಟ್ಟಿಗೆ ಹೊರಗುಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಅಸ್ತಿತ್ವದಲ್ಲಿರುವ ವಕೀಲರ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು. ಕಾಯ್ದೆಯಡಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿ, ವಕೀಲರ ಸುರಕ್ಷತೆಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ವಕೀಲರಾದ ದೇವದಾಸ್ ವಿ. ಶೆಟ್ಟಿ, ಕರ್ನಾಟಕ ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಇಂತಹ ಘಟನೆಗಳಿಗೆ ಕೊನೆ ಇಲ್ಲದಂತಾಗಿದೆ. ವಕೀಲರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಬೆಂಗಳೂರಿನ ವಕೀಲರ ಸಂಘವು ಇತ್ತೀಚೆಗೆ ಆನ್‌ಲೈನ್ ಸಭೆ ನಡೆಸಿ, ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸದೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿತ್ತು. ಅದರಂತೆ ಉಡುಪಿ ವಕೀಲರ ಸಂಘವು ತುರ್ತು ಸಭೆ ನಡೆಸಿ, ಒಗ್ಗಟ್ಟಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ವಕೀಲರ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯಲು ಕಠಿಣ ಕಾನೂನು ಜಾರಿಯಾಗಬೇಕು. ಈಗಾಗಲೇ ಜಾರಿಯಲ್ಲಿರುವ ವಕೀಲರ ರಕ್ಷಣಾ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ವಕೀಲರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ. ವಕೀಲರನ್ನು ಕೀಳಾಗಿ ಕಾಣುವ ಅಥವಾ ತುಚ್ಛವಾಗಿ ಪರಿಗಣಿಸುವ ಪ್ರವೃತ್ತಿಗೆ ಅಂತ್ಯ ಹಾಡಬೇಕು. ವಕೀಲರ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾಯ್ದೆ ಹಾಗೂ ಅಗತ್ಯ ತಿದ್ದುಪಡಿಗಳನ್ನು ಜಾರಿಗೆ ತಂದು ವಕೀಲ ಸಮುದಾಯಕ್ಕೆ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರೆಯ ಮೇರೆಗೆ ರಾಜ್ಯಾದ್ಯಂತ ವಕೀಲರು ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕೆಲಸಗಳಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಇದು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವ ಉದ್ದೇಶದ ಹೋರಾಟವಲ್ಲ. ಬದಲಾಗಿ ವಕೀಲರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ, ಅವರ ಸುರಕ್ಷತೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಣೆಬೆನ್ನೂರು, ಬೆಂಗಳೂರಿನ ವೈಟ್‌ಫೀಲ್ಡ್ ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ವಕೀಲರ ಹತ್ಯೆಯಂತಹ ಗಂಭೀರ ಘಟನೆಗಳು ನಡೆದಿದ್ದರೂ, ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಆತಂಕವಿದೆ. ವಕೀಲರ ರಕ್ಷಣಾ ಕಾಯ್ದೆಯನ್ನು ರೂಪಿಸುವ ಸಂದರ್ಭದಲ್ಲಿ ಅದರಲ್ಲಿನ ನಿಬಂಧನೆಗಳನ್ನು ಸಮರ್ಪಕವಾಗಿ ರೂಪಿಸದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯಾದ್ಯಂತ ವಕೀಲರು ವಿವಿಧ ರೀತಿಯ ಅವಮಾನ, ನಿಂದನೆ ಹಾಗೂ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ವಕೀಲರಿಗೆ ಗೌರವ ನೀಡುವ ಅಗತ್ಯದ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಹಲವು ಸಂದರ್ಭಗಳಲ್ಲಿ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಆದರೆ ಇಂತಹ ವಿಚಾರಗಳಲ್ಲಿ ಪರಿಣಾಮಕಾರಿ ಅನುಷ್ಠಾನ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ವಕೀಲರ ಮೇಲೆ ದೌರ್ಜನ್ಯ ಅಥವಾ ಅಗೌರವದ ಘಟನೆಗಳು ಮುಂದುವರಿದರೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಿದೆ. ಈ ಹೋರಾಟಕ್ಕೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಿರಿಯ ವಕೀಲರಾದ ಅಕಿಲ್ ಬಿ. ಹೆಗ್ಡೆ ಮಾತನಾಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದೆ. ಅದರಂತೆ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರು ಸಾಂಕೇತಿಕವಾಗಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ವಕೀಲರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಸರ್ಕಾರ ವಕೀಲರ ಹಿತದೃಷ್ಟಿಯಿಂದ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ಅದರಲ್ಲಿರುವ ಶಿಕ್ಷೆಯ ಪ್ರಮಾಣ ಸಮರ್ಪಕವಾಗಿಲ್ಲ. ವಕೀಲರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೇವಲ ಆರು ತಿಂಗಳ ಶಿಕ್ಷೆಗೆ ಅವಕಾಶವಿರುವುದು ಇಂತಹ ಕೃತ್ಯಗಳನ್ನು ತಡೆಯಲು ಸಾಕಾಗುವುದಿಲ್ಲ. ಹೀಗಾಗಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು, ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ವ್ಯವಸ್ಥೆ ಕಲ್ಪಿಸಬೇಕು. ವಕೀಲರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಕೀಲರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ವಕೀಲರು ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಿದ್ದಾರೆ. ವಕೀಲರ ರಕ್ಷಣೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಗೌರವದ ದೃಷ್ಟಿಯಿಂದ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿ, ಅಸ್ತಿತ್ವದಲ್ಲಿರುವ ವಕೀಲರ ರಕ್ಷಣಾ ಕಾಯ್ದೆಗೆ ಅಗತ್ಯ ತಿದ್ದುಪಡಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.







