ಶಿರಸಿ: ಕೌಟುಂಬಿಕ ಕಲಹ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ನಡೆಯುತ್ತಿದ್ದ ವೇಳೆ, ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಗಂಭೀರ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಈ ಸಂಬಂಧ ಪತ್ನಿ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದಯ ನಾರಾಯಣ ಪೂಜಾರಿ (40) ಮುಂಡಗೋಡ ತಾಲೂಕು ಇವರು ನೀಡಿದ ದೂರಿನ ಮೇರೆಗೆ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 217/2026 ರಡಿ ಬಿ.ಎನ್.ಎಸ್.-2023 ರ ಕಲಂ 189(2), 191(2), 109, 115(2) ಸಹಿತ 190 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಬು ಮಂಜಾ ಪೂಜಾರಿ, ರಾಘವೇಂದ್ರ ಬಾಬು ಪೂಜಾರಿ, ಕಮಲಾಕರ ಬಾಬು ಪೂಜಾರಿ, ಶಿಲ್ಪಾ ಕೋಂ. ಉದಯ ಪೂಜಾರಿ ಮತ್ತು ಲಕ್ಷ್ಮಿ ಕೋಂ. ಬಾಬು ಪೂಜಾರಿ (ಎಲ್ಲರೂ ಶಿರಸಿ ತಾಲೂಕಿನವರು) ದೂರು ದಾಖಲಾಗಿದೆ.
ಘಟನೆಯ ವಿವರ: ಫಿರ್ಯಾದಿ ಉದಯ ನಾರಾಯಣ ಪೂಜಾರಿ ಅವರು ಶಿಲ್ಪಾ ಅವರನ್ನು ವಿವಾಹವಾಗಿದ್ದರು. ಎರಡನೇ ಮಗುವಿನ ಹೆರಿಗೆಗಾಗಿ ಶಿಲ್ಪಾ ಅವರು ಶಿರಸಿ ತಾಲೂಕಿನ ಜವಳಗುಂಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸೋಂದಾದ ಜ್ಯೋತಿಷಿ ಗಣಪತಿ ಭಟ್ ಎಂಬುವವರು ಮನೆಗೆ ಬಂದಾಗ, ಫಿರ್ಯಾದಿಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ವಿಚ್ಛೇದನ ನೀಡುವಂತೆ ಶಿಲ್ಪಾಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ ಗಣೇಶ ಮೊಗೇರ ನೇಮಕ
ಈ ವಿಷಯ ತಿಳಿದು ಪತಿ-ಪತ್ನಿ ನಡುವೆ ಜಗಳವಾಗಿದ್ದು, ಶಿಲ್ಪಾ ಅವರು ಪತಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 28, 2026 ರಂದು ನ್ಯಾಯಾಲಯದಲ್ಲಿ ನಡೆದ ಮಧ್ಯಸ್ಥಿಕೆ ಸಭೆಯಲ್ಲಿ ರಾಜಿ ಸಂಧಾನಕ್ಕೆ ಒಪ್ಪದ ಶಿಲ್ಪಾ ತವರು ಮನೆಗೆ ತೆರಳಿದ್ದರು.
ನಂತರ ಅಕ್ಟೋಬರ್ 29 ರಂದು ಬೆಳಿಗ್ಗೆ 09:10 ಗಂಟೆಗೆ ಪತಿಗೆ ಕರೆ ಮಾಡಿದ್ದ ಶಿಲ್ಪಾ, ಮಾತನಾಡುವುದಿದೆ ಎಂದು ಜವಳಗುಂಡಿಗೆ ಕರೆಸಿಕೊಂಡಿದ್ದರು. ಅದೇ ದಿನ ಸಂಜೆ 07:00 ಗಂಟೆಗೆ ಫಿರ್ಯಾದಿ ಆರೋಪಿತರ ಮನೆಗೆ ತೆರಳಿದಾಗ, ಆಸ್ತಿ ದಾಖಲೆಗಳಿಗೆ ಸಹಿ ಮಾಡುವಂತೆ ಒತ್ತಾಯಿಸಿ ಜಗಳವಾಡಿದ್ದಾರೆ. ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಫಿರ್ಯಾದಿ ಸಹಿ ಮಾಡಲು ನಿರಾಕರಿಸಿದ್ದಾರೆ.
ಬಲವಂತವಾಗಿ ವಿಷ ಪ್ರಾಶನಕ್ಕೆ ಯತ್ನ: ಆಸ್ತಿ ಹಾಗೂ ಚರ-ಸ್ಥಿರ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 1ನೇ ಆರೋಪಿ (ಮಾವ), 2ನೇ ಆರೋಪಿ (ಬಾವ) ಹಾಗೂ 3ನೇ ಆರೋಪಿ ಕೈಯಿಂದ ಫಿರ್ಯಾದಿಯ ಬಲ ಕಣ್ಣಿನ ಹುಬ್ಬಿನ ಬಳಿ ಹೊಡೆದಿದ್ದಾರೆ. ಜತೆಗೆ ಬಲವಂತವಾಗಿ ಸಾರಾಯಿ ಕುಡಿಸಿ ಅಸ್ವಸ್ಥಗೊಳಿಸಿದ್ದಾರೆ. ನಂತರ 4 ಮತ್ತು 5ನೇ ಆರೋಪಿಗಳು (ಅತ್ತೆ) ಸೇರಿಕೊಂಡು ಫಿರ್ಯಾದಿಯ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದು ಮೂಗು ಒತ್ತಿ ಹಿಡಿದು. ಬಾಯಿಗೆ ಕ್ರಿಮಿನಾಶಕ ವಿಷವನ್ನು ಹಾಕಿ ಕೊಲೆ ಮಾಡಲು ಯತ್ನಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಸಂತ್ರಸ್ತ ಉದಯ ಪೂಜಾರಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




