ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ಚುರುಕುಗೊಂಡಿದ್ದು, ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಕಾಡವಾದ, ಕಮಠಾಣ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, “ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಜುಲೈ 29 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎಣಿಕೆ (Enumeration) ನಮೂನೆಗಳನ್ನು ವಿತರಿಸುತ್ತಿದ್ದಾರೆ. ಬಿ.ಎಲ್.ಒ.ಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಮೂನೆಗಳನ್ನು ಹಿಂತಿರುಗಿಸಿ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಜಿಲ್ಲೆಯಲ್ಲಿ ಒಟ್ಟು 1,528 ಮತಗಟ್ಟೆಗಳು ಹಾಗೂ 14,61,959 ಮತದಾರರು ಇದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿರುವುದರಿಂದ ಎಲ್ಲ ಮತದಾರರು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು” ಎಂದು ತಿಳಿಸಿದ್ದಾರೆ.
ಸ್ವೀಪ್ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪಂಚಾಯತ್ ಸಿಇಒ ಡಾ.ಗೀರಿಶ್ ಬದೋಲೆ ಅವರು ಜೂ.30ರಂದು ಬೀದರ್ ನಗರದ ವಿವಿಧ ಬಡಾವಣೆಯ ಮನೆಗಳಿಗೆ ಭೇಟಿ ನೀಡಿ ಎಣಿಕೆ ನಮೂನೆಗಳನ್ನು ವಿತರಿಸಿದರು. ನಮೂನೆ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳನ್ನು ಲಗತ್ತಿಸುವುದು ಹಾಗೂ ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಗೂಡ್ಸ್ ವಾಹನ-ಕಾರು ಡಿಕ್ಕಿ : ಓರ್ವ ಯುವಕ ಸಾವು
ಜಿಲ್ಲೆಯಾದ್ಯಂತ ಎಸ್.ಐ.ಆರ್. ಕುರಿತು ಜಾಗೃತಿ ಅಭಿಯಾನವೂ ತೀವ್ರಗೊಂಡಿದ್ದು, ತಹಶೀಲ್ದಾರರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕಾರ್ಯ ನಡೆಯುತ್ತಿದೆ. ಜುಲೈ 1ರವರೆಗೆ ಜಿಲ್ಲೆಯಲ್ಲಿ 70,359 ಎಣಿಕೆ ನಮೂನೆಗಳನ್ನು ವಿತರಿಸಲಾಗಿದ್ದು, 2,073 ಅರ್ಜಿಗಳ ಮಾಹಿತಿಯನ್ನು ಡೇಟಾ ಎಂಟ್ರಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.




