ಸಮಾಜದ ದುರ್ಬಲ ವರ್ಗಗಳು, ದಲಿತರು ಹಾಗೂ ಅಸಹಾಯಕ ಮಹಿಳೆಯರ ಸಬಲೀಕರಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವುದು ನನ್ನ ಜೀವನದ ಸಾರ್ಥಕತೆ ಎಂದು ಹಿರಿಯ ಸಮಾಜ ಸೇವಕಿ ಡಾ.ಗುರಮ್ಮಾ ಸಿದ್ದಾರೆಡ್ಡಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ವಿಭಾಗದ ವತಿಯಿಂದ ಬೀದರ್ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜೂ.10 ರಂದು ಆಯೋಜಿಸಿದ್ದ ʼಸಾಧಕರೊಂದಿಗೆ ಸಂವಾದ-2026’ ಕಾರ್ಯಕ್ರಮ ಉದ್ಘಾಟಿಸಿ, ಅವರು ತಮ್ಮ ಜೀವನ ಸಾಧನೆ ಹಾಗೂ ಸಮಾಜ ಸೇವೆಯ ಪಯಣವನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ 1946ರ ಫೆಬ್ರುವರಿ 4ರಂದು ಜನಿಸಿದ ತಾವು, 1965ರಲ್ಲಿ ಡಾ.ಎಸ್.ಎಸ್.ಸಿದ್ದಾರೆಡ್ಡಿ ಅವರೊಂದಿಗೆ ವಿವಾಹವಾಗಿ ಬೀದರ್ಗೆ ಆಗಮಿಸಿದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.
“ಬಾಲ್ಯದಲ್ಲಿ ಕೆಲ ಕಾಲ ಶಿಕ್ಷಣದಿಂದ ವಂಚಿತಳಾದ ನೋವು ನನ್ನನ್ನು ಸದಾ ಕಾಡುತ್ತಿತ್ತು. ಅದೇ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಮದುವೆಯಾಗಿ ಮಕ್ಕಳಾದ ನಂತರವೂ ಶಿಕ್ಷಣದ ಕನಸನ್ನು ಕೈಬಿಡದೆ ಅಕ್ಕಮಹಾದೇವಿ ಮಹಿಳಾ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಜನರ ಟೀಕೆಗಳನ್ನು ಲೆಕ್ಕಿಸದೇ ಉನ್ನತ ಶಿಕ್ಷಣ ಪಡೆದೆ. ನನ್ನ ಸಮಾಜ ಸೇವೆಯ ಹಿಂದೆ ಪತಿಯ ಸಹಕಾರವೂ ಪ್ರಮುಖವಾಗಿದೆ” ಎಂದು ಅವರು ಹೇಳಿದರು.

ಮಹಿಳೆಯರ ಶಿಕ್ಷಣ ವಿರಳವಾಗಿದ್ದ ಕಾಲಘಟ್ಟದಲ್ಲಿಯೇ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ.ಪದವಿ ಪಡೆದಿರುವ ನಾನು 40ಕ್ಕೂ ಹೆಚ್ಚು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದೇನೆ. ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳವನ್ನು ಸ್ಥಾಪಿಸಿ ಸಾವಿರಾರು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ನೆರವಾದ ಅನುಭವವನ್ನು ಹಂಚಿಕೊಂಡ ಅವರು, ಕೊಳಚೆ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ವಿಕಲಚೇತನ ಮಹಿಳೆಯರಿಗೆ ವಸತಿ ಸೌಲಭ್ಯ, ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದಾಗಿ ವಿವರಿಸಿದರು.
“ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನೇತ್ರತ್ವದ ಕರ್ನಾಟಕ ಸರ್ಕಾರವು 2000ರಲ್ಲಿ ಮಹಿಳಾ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷೆಯನ್ನಾಗಿ ನೇಮಿಸಿತ್ತು. ಈ ಸಮಿತಿಯ ಶಿಫಾರಸುಗಳ ಫಲವಾಗಿ ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಹಾಗೂ ಮಹಿಳಾ ದೂರುಗಳ ವಿಚಾರಣಾ ವ್ಯವಸ್ಥೆ ರೂಪುಗೊಂಡಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದರು.
ತಮ್ಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2005ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, 2018ರಲ್ಲಿ ಅಂತರರಾಷ್ಟ್ರೀಯ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿರುವುದನ್ನು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪಾರ್ವತಿ ಸೋನಾರೆ, ಭಾರತಿ ವಸ್ತ್ರದ್ ಹಾಗೂ ಮಂಗಲಾ ಭಾಗವತ್, ವಿಜಯಕುಮಾರ್ ಸೋನಾರೆ, ಅವರು ಮಹಿಳಾ ಸಬಲೀಕರಣ, ಸಮಾಜ ಸೇವೆಯ ಸವಾಲುಗಳು ಮತ್ತು ಸಾಧನೆಯ ಹಿಂದಿನ ಪ್ರೇರಣೆ ಕುರಿತು ಪ್ರಶ್ನೆಗಳನ್ನು ಕೇಳಿದರು. ಡಾ.ಗುರಮ್ಮಾ ಸಿದ್ದಾರೆಡ್ಡಿ ಅವರು ತಮ್ಮ ಅನುಭವಗಳನ್ನು ಉತ್ತರಿಸಿದರು.
ಇದನ್ನೂ ಓದಿ : ತೆಲಂಗಾಣ | ಮಾವಿನ ಹಣ್ಣು ತಿಂದು ಸಹೋದರಿಯರಿಬ್ಬರು ಅನುಮಾನಾಸ್ಪದ ಸಾವು!
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹಾಗೂ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿದರು.
ಪ್ರಮುಖರಾದ ಜಗನ್ನಾಥ ಹೆಬ್ಬಾಳೆ, ಶಂಭುಲಿಂಗ ವಾಲ್ದೊಡ್ಡಿ, ಬಾಬುರಾವ ದಾನಿ, ಎಸ್.ಎಂ.ಜನವಾಡಕರ್, ನವಲಿಂಗ ಪಾಟೀಲ್, ಮಾರುತಿ ಚಾಂಬೋಳ್, ದೇವಿದಾಸ ಜೋಶಿ ಸೇರಿದಂತೆ ಜಿಲ್ಲೆಯ ಪ್ರಗತಿಪರ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.





