ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳಾಗಿದ್ದು, ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡು ಸಮಾಜದ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಹೇಳಿದರು.
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಮೂರು ವರ್ಷದ ಪದವಿ ಶಿಕ್ಷಣ ಪೂರ್ಣಗೊಳಿಸಿ ಹೊರಡುವ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ ಕುಂದಲ್ಪಾಡಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಗಳಿಸುವತ್ತ ಗಮನಹರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಜೊತೆಗೆ ಪೋಷಕರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ. ಮಾತನಾಡಿ, ವಿದ್ಯಾರ್ಥಿಗಳು ನಿಷ್ಠೆ, ಪ್ರಾಮಾಣಿಕತೆ ಸೇರಿದಂತೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆದು ಧೈರ್ಯದಿಂದ ಜೀವನವನ್ನು ಎದುರಿಸಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ. ಕೆ. ಬಸವರಾಜು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ಪ್ರೊ. ದಯಾನಂದ ಕೆ.ಸಿ. ಸ್ವಾಗತಿಸಿದರು. ಕ್ರೀಡಾ ಸಮಿತಿ ಸಂಚಾಲಕ ಪ್ರೊ. ಗುರುಪ್ರಸಾದ್ ಎನ್. ವಂದಿಸಿದರು.
ಈ ಸಂದರ್ಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ತೃತೀಯ ಬಿ.ಎ. ವಿದ್ಯಾರ್ಥಿನಿ ಕೀರ್ತನಾ ಪಡೆದರು. ವರ್ಷದ ಅತ್ಯುತ್ತಮ ವಿದ್ಯಾರ್ಥಿ ನಾಯಕ ಪ್ರಶಸ್ತಿಗೆ ತೃತೀಯ ಬಿ.ಎ. ವಿದ್ಯಾರ್ಥಿ ನಿಶಾನ್ ಜೋಸೆಫ್ ಭಾಜನರಾದರು. ವರ್ಷದ ಅತ್ಯುತ್ತಮ ಶ್ರದ್ಧಾ ವಿದ್ಯಾರ್ಥಿಯಾಗಿ ದರ್ಶನ್, ಅತ್ಯುತ್ತಮ ಕ್ರೀಡಾಪಟುವಾಗಿ ರಸೀನಾ ಹಾಗೂ ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆಯಾಗಿ ಸುಹೈರಾ ಆಯ್ಕೆಯಾದರು.
ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕರಾಗಿ ತೃತೀಯ ಬಿ.ಎ. ವಿದ್ಯಾರ್ಥಿಗಳಾದ ಮಂಜು, ಚಂದ್ರಶೇಖರ, ಪುನೀತ್ ಕುಮಾರ್ ಹಾಗೂ ಸೋನಾ ನಿವಿತಾ ಆಯ್ಕೆಯಾಗಿದ್ದು, ಇವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ?ಮಂಡ್ಯ | ಯೋಗನರಸಿಂಹಸ್ವಾಮಿ ಹುಂಡಿ ಕಳವು: ನಾರಾಯಣ ಭಟ್ಟ, ತಿರುವೆಂಗಡಾಚಾರ್ ಇತರರ ವಿರುದ್ಧ ಎಫ್ಐಆರ್
ಇದಲ್ಲದೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಾರ್ಷಿಕ ಸಂಚಿಕೆ ‘ವಿರಾಜಮಾರ್ಗ’ ಅನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.





