ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಾವಣ್ಯ ಗುಂಡಪ್ಪ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಉರ್ದು ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದು ಗಮನ ಸೆಳೆದಿದ್ದಾಳೆ.
ಪರೀಕ್ಷೆಯಲ್ಲಿ 625ಕ್ಕೆ 561 ಅಂಕ ಪಡೆದು ಶೇ 89.76ರಷ್ಟು ಅಂಕ ಪಡೆದು ಸಾಧನೆ ಮಾಡಿರುವ ಲಾವಣ್ಯ ಕನ್ನಡ ಭಾಷೆಯಲ್ಲಿ 125ಕ್ಕೆ 74 ಅಂಕ ಪಡೆದಿದ್ದಾರೆ.
ಮಾತೃ ಭಾಷೆ ಕನ್ನಡವಾದರೂ ಉರ್ದು ಭಾಷೆಯಲ್ಲಿ 125 ಅಂಕ ಪಡೆದು ಸಾಧನೆ ಮಾಡಿರುವ ಲಾವಣ್ಯಗೆ ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಮೊಹಮ್ಮದ್ ಅಮೀನ್ ನವಾಜ್ ಅವರು ಬೀದರನಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಿದರು.
ಬಳಿಕ ಮೊಹಮ್ಮದ್ ಅಮೀನ್ ನವಾಜ್ ಅವರು ಮಾತನಾಡಿ, ʼದೃಢ ಸಂಕಲ್ಪದೊಂದಿಗೆ ಪರಿಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಲಾವಣ್ಯ ಅವರೇ ನಿದರ್ಶನವಾಗಿದ್ದಾರೆ. ಲಾವಣ್ಯ ಅವರ ಮಾತೃ ಭಾಷೆ ಕನ್ನಡವಾಗಿದೆ. ಆದರೆ, ಆಸಕ್ತಿ ವಹಿಸಿ ಕಲಿತಿದ್ದರಿಂದ ಅವರಿಗೆ ಉರ್ದು ನೀರು ಕುಡಿದಷ್ಟೇ ಸರಳವಾಗಿದೆ. ಉರ್ದು ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿರುವ ವಿದ್ಯಾರ್ಥಿನಿಯ ಸಾಧನೆ ಪ್ರಸಂಸನೀಯʼ ಎಂದರು.
ʼವಿದ್ಯಾರ್ಥಿನಿ ಲಾವಣ್ಯ ಸಾಧನೆ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಉರ್ದು ಸಂಘ- ಸಂಸ್ಥೆಗಳು ಲಾವಣ್ಯ ಅವರಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಸಮಕಾಲೀನ ಸಾಹಿತ್ಯಕ್ಕೆ ಗಂಭೀರ ವಿಮರ್ಶೆ ಬೇಕು : ಮಹಾಂತೇಶ ಪಾಟೀಲ
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಜಾಸ್ಮಿನ್ ಗ್ರೂಫ್ ಆಫ್ ಇನ್ಸ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಅಜಿಜ್ ಖಾನ್, ಭಾತಂಬ್ರಾದ ಉರ್ದು ಮಾಧ್ಯಮ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಮೊಹಮ್ಮದ್ ಖಲೀಲ್, ಲಾವಣ್ಯ ಪೋಷಕರು ಇದ್ದರು.





