ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಚಿತ್ರವನ್ನು ಅವರಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಗುಪ್ತವಾಗಿ ಚಿತ್ರೀಕರಿಸಿ, ಆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯ ವಿಕೃತ ವರ್ತನೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ತನ್ನ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಸಾರಾಸಗಟಾಗಿ ತಿರಸ್ಕರಿಸಿದೆ.
ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಬಿ ಕೆ ದಿಗಂತ್ ಎಂಬಾತ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ವಿಡಿಯೊಗಳನ್ನು ಅವರಿಗರಿವಿಲ್ಲದಂತೆ ಚಿತ್ರೀಕರಿಸುತ್ತಿದ್ದ. ಬಳಿಕ ಆ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತಾನು ನಿರ್ವಹಿಸುತ್ತಿದ್ದ ‘ಬೆಂಗಳೂರು ಮೆಟ್ರೋ ಚಿಕ್ಸ್’ (Metro Chicks) ಎಂಬ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದ ಈತನ ಈ ವಿಕೃತ ಕೃತ್ಯದ ವಿರುದ್ಧ ದೂರು ದಾಖಲಾಗಿ, ಬಂಧನವೂ ಆಗಿತ್ತು. ಈ ಸಂಬಂಧ ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿ ದಿಗಂತ್, ತನ್ನ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಆರೋಪಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿತು. ವಿಚಾರಣೆ ವೇಳೆ ಕಿಡಿಕಾರಿದ ನ್ಯಾಯಾಧೀಶರು, ‘ನೀವೆಂಥಾ ಗಂಡಸರು? ಮಹಿಳೆಯರನ್ನು ಎಲ್ಲೂ ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲವೇ? ಈ ಮೆಟ್ರೋ ಚಿಕ್ಸ್ ಎಂದರೆ ಏನು? ಇದೆಂಥಾ ಅಸಂಬದ್ಧ?’ ಎಂದು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳಿಗೂ, ಮಹಿಳೆಯರ ಬೆನ್ನಹಿಂದೆ ಅವರ ಅನುಮತಿಯಿಲ್ಲದೆ ಗುಪ್ತವಾಗಿ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಡುವುದಕ್ಕೂ ಬಹಳ ವ್ಯತ್ಯಾಸವಿದೆ. ಇದನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ಕಣ್ಗಾವಲು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ
ಆರೋಪಿಯ ಪರ ವಕೀಲರು, ‘ತನಿಖಾಧಿಕಾರಿಯೇ ದೂರುದಾರರಾಗಿದ್ದಾರೆ, ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ’ ಎಂಬಂತಹ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಕರಣದಿಂದ ಪಾರಾಗಲು ಯತ್ನಿಸಿದರು. ಆದರೆ, ಇದನ್ನು ತಳ್ಳಿಹಾಕಿದ ನ್ಯಾಯಾಲಯ, “ಮಹಿಳೆಯರ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಇಂತಹ ಗಂಭೀರ ಪ್ರಕರಣಗಳಲ್ಲಿ ನಿಮ್ಮ ಈ ಕೃತ್ಯವನ್ನು ತಾಂತ್ರಿಕ ನೆಪಗಳು ಮರೆಮಾಚಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ತಾಂತ್ರಿಕತೆಗಳ ಹಿಂದೆ ಅಡಗಿಕೊಳ್ಳುವ ಕಾಲ ಮುಗಿದಿದೆ” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿತು.
ಮಹಿಳೆಯರ ಖಾಸಗಿತನದ ಉಲ್ಲಂಘನೆ ಮತ್ತು ಕಿರುಕುಳವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಆರೋಪಿಯ ಅರ್ಜಿಯನ್ನು ವಜಾಗೊಳಿಸಿ ಆತನ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಆದೇಶಿಸಿದೆ.





