ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಬೀದರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಗಸ್ಟ್ 13ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯ ಸಲಹಾ ಕಾರ್ಯಧ್ಯಕ್ಷ ಚಂದ್ರಕಾಂತ ಹೂಗಾರ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಅಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ಗಂಜ್‌ನ ಬಸವಣ್ಣನ ದೇವಸ್ಥಾನದಿಂದ ಚಿದ್ರಿ ಬಳಿಯ ಬುತ್ತಿ ಬಸವಣ್ಣನ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ನಂತರ ಬುತ್ತಿ ಬಸವಣ್ಣನ ದೇವಸ್ಥಾನದ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕಪಿಲ್ ಹೂಗಾರ, ಕಾರ್ಯಾಧ್ಯಕ್ಷ ಸಿದ್ದು ಫುಲಾರಿ ಸೇರಿದಂತೆ ಇತರೆ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಆಗಮಿಸಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮಹಾಸಭಾದ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದು ಫುಲಾರಿ ಮಾತನಾಡಿ, “ಬಹು ದಿನಗಳ ಹೋರಾಟದ ಫಲವಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರ್ಕಾರ ಹೂಗಾರ ನಿಗಮ ಸ್ಥಾಪಿಸಿತು, ಆದರೆ, ಸರ್ಕಾರ ನಿಗಮಕ್ಕೆ ಇಲ್ಲಿಯವರೆಗೆ ಅನುದಾನ ಸೇರಿದಂತೆ ಅಧ್ಯಕ್ಷರ ನೇಮಕವೂ ಮಾಡಿಲ್ಲ. ನಿಗಮಕ್ಕೆ ಸೂಕ್ತ ಅನುದಾನ ಒದಗಿಸಿ, ಅಧ್ಯಕ್ಷರ ನೇಮಕಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರದಿಂದ ಸ್ಪಂದನೆ ದೊರೆಯುತ್ತಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತು ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಲಾಗುವುದು” ಎಂದರು.
ಇದನ್ನೂ ಓದಿ : ಬೀದರ್ | ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಪ್ರಮುಖರಾದ ಸತೀಶ ಹೂಗಾರ, ಶ್ರೀನಿವಾಸ, ಹಣಮಂತಪ್ಪ ಹೂಗಾರ, ಮಾದಪ್ಪ ಹೂಗಾರ, ಮಹಾದೇವ ಹೂಗಾರ, ಬಸವರಾಜ ಹೂಗಾರ, ರಾಜಕುಮಾರ, ಘಾಳೆಪ್ಪಾ ಸೇರಿದಂತೆ ಅನೇಕರಿದ್ದರು.




