ಮಳೆಗಾಲ ಆರಂಭವಾದ ಬಳಿಕ ಬೀದರ್ ಮಹಾನಗರದ ಪ್ರಮುಖ ರಸ್ತೆಗಳು, ಬಡಾವಣೆಗಳ ಒಳರಸ್ತೆಗಳು ಆಳವಾದ ಗುಂಡಿ, ತಗ್ಗುಗಳಿಂದ ಸಂಚಾರಕ್ಕೆ ಅಪಾಯಕಾರಿಯಾಗಿವೆ ಎಂದು ಆರೋಪಿಸಿ, ಭಾರತೀಯ ಜನತಾ ಪಕ್ಷ ಬೀದರ ನಗರ ಮಂಡಲ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ಮಧ್ಯೆ ಸೃಷ್ಟಿಯಾದ ಗುಂಡಿಯಲ್ಲಿ ಸಸಿ ನೆಟ್ಟು ಆಕ್ರೋಶ ಹೊರಹಾಕಿದರು. ಬಳಿಕ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, “ನಗರದ ಅಭಿವೃದ್ಧಿಗಾಗಿ ಕಳೆದ ಮಾರ್ಚ್ ಅಧಿವೇಶನದಲ್ಲಿ ನಗರ ಪಾಲಿಕೆಗೆ ₹200 ಕೋಟಿ ಅನುದಾನ ಮಂಜೂರಾಗಿ, ಹಣ ಬಿಡುಗಡೆಯಾಗಿ ಐದಾರು ತಿಂಗಳು ಕಳೆದರೂ ಕಾಮಗಾರಿಗಳ ಅಂದಾಜು ಕ್ರಿಯಾಯೋಜನೆ ಸಿದ್ಧಗೊಂಡಿಲ್ಲ, ಅನುದಾನ ಹಂಚಿಕೆ ಪ್ರಕ್ರಿಯೆಯೂ ಆರಂಭವಾಗಿಲ್ಲ” ಎಂದು ಆರೋಪಿಸಿದರು.
“ನಗರದ ಮುಖ್ಯರಸ್ತೆಗಳಲ್ಲಿ ತಗ್ಗು, ಗುಂಡಿಗಳು ಕಾಣಿಸಿಕೊಂಡಿರುವುದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಇದರ ನೇರ ಪರಿಣಾಮವನ್ನು ಬೀದರ್ ನಗರದ ಜನರು ಅನುಭವಿಸುತ್ತಿದ್ದಾರೆ. ಅನುದಾನ ಯಾವ ಕಾಮಗಾರಿಗಳಿಗೆ ಹಂಚಿಕೆಯಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಅಭಿವೃದ್ಧಿ ಯೋಜನೆಗಳಲ್ಲಿ ಆಗಿರುವ ವಿಳಂಬದಿಂದ ನಗರದ ಮೂಲಸೌಕರ್ಯ ಅಭಿವೃದ್ಧಿ ಕುಂಠಿತಗೊಂಡಿದೆ” ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, “ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಯಾಗಿದ್ದರೂ ಕಳಪೆ ಕಾಮಗಾರಿಗಳು ನಡೆಸಲಾಗಿದೆ. ಏರ್‌ಫೋರ್ಸ್‌ದಿಂದ ಚಿದ್ರಿವರೆಗೆ ಡಿವೈಡರ್, ವಿದ್ಯುತ್ ಕಂಬ ಹಾಗೂ ಬೀದಿ ದೀಪ ಅಳವಡಿಸಿರುವುದನ್ನೇ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಒಂದೆಡೆ ಕಾಮಗಾರಿ ನಡೆಸಿ ಮತ್ತೊಂದೆಡೆ ಅಭಿವೃದ್ಧಿ ತೋರಿಸುವ ಕೆಲಸ ನಡೆಯುತ್ತಿದೆ. ರಸ್ತೆಗಳಲ್ಲಿ ಗುಂಡಿ ಕಾಣಿಸುವ ಬದಲು ಗುಂಡಿಗಳ ಮಧ್ಯೆ ರಸ್ತೆ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಗರದ ಸಾರ್ವಜನಿಕರು, ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು
“ಹದಗೆಟ್ಟ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಹಾಗೂ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ, ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಹೋರಾಟದ ಚಿತ್ರಗಳು ಬಳಸಿಕೊಂಡು ಪುನಃ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿ, ನಗರದ ಅಭಿವೃದ್ಧಿಗೆ ಮತ್ತಷ್ಟು ₹200 ಕೋಟಿ ಅನುದಾನ ತರಲು ಪ್ರಯತ್ನಿಸಬಾರದು ಎಂದು ಹೇಳಿದ ಅವರು, ಅನುದಾನ ಬಳಕೆಯಲ್ಲಿ ಪಾರದರ್ಶಕತೆ ಕಾಪಾಡಿ ನಗರದ ಅಭಿವೃದ್ಧಿ ಮಾಡಬೇಕು” ಎಂದು ಹೇಳಿದರು.
ಬಿಜೆಪಿ ಬೀದರ್ ನಗರ ಮಂಡಲ ಅಧ್ಯಕ್ಷ ಶಶಿಧರ್ ಹೊಸಳ್ಳಿ ಮಾತನಾಡಿ, “ಮಳೆಗಾಲ ಆರಂಭವಾದ ಬಳಿಕ ನಗರದ ಪ್ರಮುಖ ರಸ್ತೆಗಳಿಂದ ಹಿಡಿದು ಬಡಾವಣೆಗಳ ಒಳರಸ್ತೆಗಳವರೆಗೆ ಗುಂಡಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿನಿತ್ಯ ಜೀವಭಯದಲ್ಲೇ ಸಂಚರಿಸುವಂತಾಗಿದೆ” ಎಂದು ಆರೋಪಿಸಿದರು.
“ಈಚೆಗೆ ಸುರಿದ ಮಳೆಯಿಂದಾಗಿ ಹಿನ್ನೆಲೆಯಲ್ಲಿ ಬಿಜೆಪಿ ತಂಡ ನಗರದ ವಿವಿಧ ಭಾಗಗಳಲ್ಲಿ ʼರಿಯಾಲಿಟಿ ಚೆಕ್ʼ ನಡೆಸಿದ್ದು, ಹಲವು ರಸ್ತೆಗಳಲ್ಲಿ ಆಳವಾದ ಗುಂಡಿಗಳು, ತಗ್ಗುಗಳು ಹಾಗೂ ಮಳೆ ನೀರು ಸಂಗ್ರಹವಾದ ದೃಶ್ಯಗಳು ಕಂಡುಬಂದಿವೆ. ಇದು ನಗರದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ಮಳೆನೀರು ನಿರ್ವಹಣೆಯ ವೈಫಲ್ಯವನ್ನು ಬಿಜೆಪಿ ಬಯಲಿಗೆಳೆದಿದೆ” ಎಂದು ಅವರು ಹೇಳಿದರು.
“ಕ್ಷೇತ್ರದ ಶಾಸಕ ರಹೀಂ ಖಾನ್ ಅವರು ಈ ಸಮಸ್ಯೆಗಳ ಕುರಿತು ತಕ್ಷಣ ಗಮನಹರಿಸಿ, ಮುಂದಿನ ಒಂದು ತಿಂಗಳೊಳಗೆ ರಸ್ತೆ ದುರಸ್ತಿ, ಗುಂಡಿ ಮುಚ್ಚುವ ಕಾಮಗಾರಿ ಹಾಗೂ ಶಾಶ್ವತ ಮಳೆನೀರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಬಿಜೆಪಿ ನೇತೃತ್ವದಲ್ಲಿ ʼಬೀದರ್ ಬಂದ್ʼಗೆ ಕರೆ ನೀಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರಪ್ಪ ಯರನಳ್ಳಿ ಸೇರಿದಂತೆ ಪ್ರಮುಖರಾದ ಕಿರಣ ಪಾಟೀಲ್, ರಾಜಕುಮಾರ್ ಚಿದ್ರಿ, ಅಶೋಕ ಹೊಕ್ರಾಣೆ, ಅಶೋಕಕುಮಾರ ಕರಂಜೆ, ದೀಪಕ ಗಾದಗೆ, ಸುಭಾಷ್ ಮಡಿವಾಳ, ಮಹೇಶ್ವರ ಸ್ವಾಮಿ, ಪ್ರಭು ಪಾಟೀಲ್, ನಗರ ಪ್ರದಾನ ಕಾರ್ಯದರ್ಶಿ ಗಣೇಶ ಭೋಸ್ಲೆ, ಸುನೀಲ ಗೌಳಿ, ರೋಷನ್ ವರ್ಮಾ, ನವೀನ್ ಚಿಟ್ಟಾ, ವಿಜಯಲಕ್ಷ್ಮಿ ಕೌಟಗೆ, ಸಂಜು ಪಟೇಲ್, ಸಂಗಮೇಶ ನಾಸಿಗರ, ನಿತೀನ ನವಲಕೆರೆ, ಸಂಗಮೇಶ್ ಗುಮ್ಮಾ, ವೀರೇಶ ಸ್ವಾಮಿ, ನರೇಶ ಗೌಳಿ, ಗುಣವಂತ ಭಾವಿಕಟ್ಟಿ, ಸಂಗಮೇಶ ಎಚ್, ರಾಜು ಜಮಾದಾರ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಬಗ್ಗೆ ಈದಿನ.ಕಾಮ್ ನಿನ್ನೆ (ಆ.2) ಬೀದರ್ ಮಹಾನಗರ ಮುಖ್ಯರಸ್ತೆಗಳ ಅಂದ ಕಸಿದ ಗುಂಡಿಗಳು! ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿರುವುದು ಇಲ್ಲಿ ಸ್ಮರಿಸಬಹುದು.




