ಹುಮನಾಬಾದ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳು, ಹೆರಿಗೆಗೆ ಬರುವ ಮಹಿಳೆಯರು ಸೇರಿದಂತೆ ಬಡ ಹಾಗೂ ಗ್ರಾಮೀಣ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ದಿಲೀಪ ಡೊಂಗರೆ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಆಗಮಿಸಿದಾಗ, ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ರಾತ್ರಿ ಪಾಳಿಯಲ್ಲಿ ವೈದ್ಯರ ಲಭ್ಯತೆ, ಮೂಲಸೌಕರ್ಯಗಳ ಅವ್ಯವಸ್ಥೆ ಹಾಗೂ ರೋಗಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಬಳಿಕ ಹಕ್ಕೊತ್ತಾಯ ಪತ್ರ ಸಲ್ಲಿಸಿ, ಒಂದು ವಾರದೊಳಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸೆಪ್ಟೆಂಬರ್ 29ರಂದು ರಾತ್ರಿ ಸುಮಾರು 11.30ರ ವೇಳೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ತುರ್ತು ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೇವೆ ದೊರೆಯದಿರುವುದು ಹಾಗೂ ಬಳಿಕ ಆಗಮಿಸಿದ ವೈದ್ಯರು ಅಗತ್ಯ ವ್ಯವಸ್ಥೆ ಇಲ್ಲವೆಂದು ತಿಳಿಸಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿರುವ ಪ್ರಕರಣವನ್ನು ವಿಶೇಷವಾಗಿ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸೆ.29ರಂದು ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ನರ್ಸ್‌ಗಳ ಹಾಜರಾತಿ, ಆಸ್ಪತ್ರೆಯಲ್ಲಿ ಲಭ್ಯವಿದ್ದ ವೈದ್ಯಕೀಯ ಸೌಲಭ್ಯಗಳು, ರೋಗಿಗೆ ಕೈಗೊಂಡ ಚಿಕಿತ್ಸಾ ಕ್ರಮಗಳು ಹಾಗೂ ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸಲು ನಿಖರವಾದ ಕಾರಣವೇನು ಎಂಬುದನ್ನು ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
This video cannot be played in your browser. Open the video directly
ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸುವುದು ಅನಿವಾರ್ಯವಾಗಿದ್ದರೆ, ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಕಾರಣವನ್ನು ರೋಗಿಯ ದಾಖಲಾತಿಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೇ ಅಗತ್ಯ ಚಿಕಿತ್ಸೆ ಹಾಗೂ ಹೆರಿಗೆ ಸೇವೆ ನೀಡಲು ಸಾಧ್ಯವಿದ್ದರೂ ರೋಗಿಯನ್ನು ಬೇರೆಡೆಗೆ ಕಳುಹಿಸಲಾಗಿದೆಯೇ ಎಂಬುದನ್ನೂ ತನಿಖೆಗೊಳಪಡಿಸಬೇಕು. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಕೆಲವು ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸಲಾಗುತ್ತಿದೆ ಎಂಬ ಸಾರ್ವಜನಿಕ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು. ಹಾಜರಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ಯಾವ ವೈದ್ಯರು ಯಾವ ವಿಭಾಗದಲ್ಲಿ ಹಾಗೂ ಯಾವ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ನಾಮಫಲಕ ಹಾಗೂ ಕರ್ತವ್ಯ ವಿವರಗಳನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಯೋಗಾಲಯ ಸೇವೆಗಳನ್ನು ಆಸ್ಪತ್ರೆಯಲ್ಲಿಯೇ ಸಮರ್ಪಕವಾಗಿ ಒದಗಿಸಬೇಕು. ಹೊರಗಿನ ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸುವ ಸಂದರ್ಭಗಳಲ್ಲಿ ಅದರ ಕಾರಣ ಹಾಗೂ ಸಂಬಂಧಿತ ನಿಯಮಗಳನ್ನು ರೋಗಿಗಳು ಮತ್ತು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಆಸ್ಪತ್ರೆಯ ಆವರಣದಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ನಿಯಮಬದ್ಧಗೊಳಿಸಿ, ರೋಗಿಗಳು ಹಾಗೂ ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯ ಜೀವ ಹಾಗೂ ಆರೋಗ್ಯದ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ನಿರ್ಲಕ್ಷ್ಯ ಅಥವಾ ಸೇವಾ ಲೋಪದಿಂದ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಅ.2ಕ್ಕೆ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ
ಪ್ರತಿಭಟನೆಯಲ್ಲಿ ಯುವರಾಜ್ ಎಸ್. ಐಹೋಳ್ಳಿ, ಭೀಮರೆಡ್ಡಿ ಸಿಂಧನಕೇರಾ, ಅರವಿಂದ ಜೋಗಿರೆ, ದಯಾನಂದ ಮೇತ್ರೆ, ಶಶಿಕಾಂತ್ ಡಾಂಗೆ, ರಾಹುಲ್ ಉದ್ದಾ, ಅನೀಲ ದೊಡ್ಡಿ, ಗಣಪತಿ ಅಷ್ಟೂರೆ, ಮನೋಜಕುಮಾರ ಸಿತಾಳೆ, ಪವನಗೊಂಡಾ, ಶಿವುರೆಡ್ಡಿ, ವಿಜಯ ಪವಾರ್, ನಾಗೇಶ ಹುಮನಾಬಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.





