- ‘ರಾಜಕಾರಣ ಬದಿಗಿಟ್ಟು, ಪ್ರಧಾನಿಗಳ ಮಧ್ಯಸ್ತಿಕೆಗೆ ಬಿಜೆಪಿ ಮುಂದಾಗಲಿ’
- ‘ಕೇಂದ್ರ ಸರ್ಕಾರದ ಮೇಲೆ ನಾವೂ ಒತ್ತಡ ಹೇರುತ್ತೇವೆ’
ಮಾಜಿ ಸಿಎಂ ಬೊಮ್ಮಾಯಿ ಅವರು ಕಾವೇರಿ ನೀರು ವಿಚಾರವಾಗಿ ನೀಡಿರುವ ಸಲಹೆ ನಮ್ಮನ್ನು ಸುಪ್ರೀಂ ಕೋರ್ಟಿನಲ್ಲಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತಹದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನೀರು ಬಿಡುಗಡೆ ಮಾಡದೆ ಕಾನೂನು ಹೋರಾಟ ನಡೆಸಬೇಕು ಎಂಬ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ಬೊಮ್ಮಾಯಿ ಹಾಗೂ ನನ್ನ ಬಳಿ ಯಾವ ಆಯ್ಕೆ ಇದೆ” ಎಂದು ಪ್ರಶ್ನಿಸಿದರು.
“ಬೊಮ್ಮಾಯಿ ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದರು ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಆದರೆ ಸುಪ್ರೀಂ ಕೋರ್ಟ್ ಅನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ನೀರು ಬಿಡಲು ನಾವು ತಯಾರಿಲ್ಲ, ಹೀಗಾಗಿ ಕಾನೂನು ಹೋರಾಟ ನಡೆಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಿಡಬ್ಲ್ಯೂಎಂಎ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್
ರಾಜಕಾರಣ ಬದಿಗಿಡಲಿ
“ರಾಜಕಾರಣ ಬದಿಗಿಟ್ಟು, ಕೂಡಲೇ ಪ್ರಧಾನಿಗಳಿಗೆ ಮಧ್ಯಸ್ಥಿಕೆ ವಹಿಸುವಂತೆ ಬೊಮ್ಮಾಯಿ ಅವರು ಆಗ್ರಹಿಸಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೂ ಮನವಿ ಸಲ್ಲಿಸಲಿ. ರಾಜ್ಯದ ಹಿತದ ಬಗ್ಗೆ ಬಿಜೆಪಿಯವರು ಧ್ವನಿ ಎತ್ತಲಿ. ದೆಹಲಿಗೆ ಹೋಗಿ, ಸಂಸದರನ್ನು ಭೇಟಿ ಮಾಡಿ ಮನವಿ ಮಾಡುವೆ. ಮಧ್ಯಸ್ಥಿಕೆ ವಹಿಸಲು ಸರ್ಕಾರದಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ “ಎಂದು ತಿಳಿಸಿದರು.
ದೇವೇಗೌಡರ ಸಲಹೆ ಸರಿ ಇದೆ
“ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಎಚ್ ಡಿ ದೇವೇಗೌಡರು ‘ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ’ ಎಂದು ಸಲಹೆ ನೀಡಿರುವುದು ಸರಿಯಾಗಿದೆ. ಹಿರಿತನದ ಅನುಭವದ ಮೇಲೆ ಅವರು ಮಾತನಾಡಿದ್ದಾರೆ. ಅವರ ಸಲಹೆ ಸ್ವಾಗತಾರ್ಹ” ಎಂದರು.