ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ, ಕೃತ್ಯ ಎಸಗಿದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ನಾಲ್ವರಿಗೆ ಸೇಡಂನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳಿಗೆ ಒಟ್ಟು ₹2.39 ಲಕ್ಷ ದಂಡವನ್ನೂ ವಿಧಿಸಿ ಆದೇಶಿಸಲಾಗಿದೆ.
ಚಿಂಚೋಳಿ ತಾಲ್ಲೂಕಿನ ಕುಡ್ಡಳ್ಳಿ ಗ್ರಾಮದ ರಾಮಪ್ಪ ಗೋಟೂರ ಕೊಲೆಯಾಗಿದ್ದವರು. ಪ್ರಕರಣದಲ್ಲಿ ರಾಮಪ್ಪನ ಪತ್ನಿ ಸುನೀತಾ ಗೋಟೂರ, ಆಕೆಯ ಪ್ರಿಯಕರ ಮಲ್ಲಪ್ಪ ಪೂಜಾರಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಸಾಬಣ್ಣ ಪೂಜಾರಿ ಮತ್ತು ಬಸಪ್ಪ ಗೋಟೂರ ಶಿಕ್ಷೆಗೆ ಗುರಿಯಾಗಿದ್ದಾರೆ.
ರಾಮಪ್ಪ ಮತ್ತು ಮಲ್ಲಪ್ಪ ಸ್ನೇಹಿತರಾಗಿದ್ದು, ಈ ಪರಿಚಯದ ಹಿನ್ನೆಲೆಯಲ್ಲಿ ಮಲ್ಲಪ್ಪ ಆಗಾಗ್ಗೆ ರಾಮಪ್ಪನ ಮನೆಗೆ ಬರುತ್ತಿದ್ದ. ಈ ವೇಳೆ ಸುನೀತಾ ಹಾಗೂ ಮಲ್ಲಪ್ಪ ನಡುವೆ ವಿವಾಹೇತರ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಈ ವಿಷಯ ತಿಳಿದ ರಾಮಪ್ಪ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಅದನ್ನು ಕಡಿತಗೊಳಿಸುವಂತೆ ಸೂಚಿಸಿದ್ದರು. ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯೂ ನಡೆದಿತ್ತು.
ಆದರೂ ಸಂಬಂಧ ಮುಂದುವರಿದ ಹಿನ್ನೆಲೆಯಲ್ಲಿ ರಾಮಪ್ಪ ತಮ್ಮ ದಾರಿಗೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿದ ಸುನೀತಾ ಮತ್ತು ಮಲ್ಲಪ್ಪ, ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. 2022ರ ಆಗಸ್ಟ್ 5ರಂದು ತಡರಾತ್ರಿ ರಾಮಪ್ಪ ಮನೆಯಲ್ಲಿ ಮಲಗಿದ್ದಾಗ ಸುನೀತಾ ಬಾಗಿಲು ತೆರೆದು ಮಲ್ಲಪ್ಪ, ಸಾಬಣ್ಣ ಹಾಗೂ ಬಸಪ್ಪ ಅವರಿಗೆ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಳು.
This video cannot be played in your browser. Open the video directly

ಮನೆಯೊಳಗೆ ಪ್ರವೇಶಿಸಿದ ಮೂವರು ರಾಮಪ್ಪನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದರು. ಈ ವೇಳೆ ಎಚ್ಚರಗೊಂಡಿದ್ದ ರಾಮಪ್ಪನ ಮಕ್ಕಳನ್ನು ಸುನೀತಾ ಮತ್ತೊಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಳು. ಬಳಿಕ ಮೃತದೇಹವನ್ನು ಸಾಗಿಸಲು ಆರೋಪಿಗಳು ಮುಂದಾದಾಗ ಮಕ್ಕಳ ಪೈಕಿ ಒಬ್ಬರು ಅಲ್ಲಿಂದ ತಪ್ಪಿಸಿಕೊಂಡು ದೊಡ್ಡಪ್ಪನಿಗೆ ವಿಷಯ ತಿಳಿಸಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.
ಘಟನೆ ಕುರಿತು ಸುಲೇಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಅಂದಿನ ಸಿಪಿಐ ಜಗದೀಶ ಕೆ.ಜಿ. ಅವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸೇಡಂನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ಆರೋಪಗಳು ಸಾಬೀತಾಗಿವೆ ಎಂದು ಪರಿಗಣಿಸಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹2.39 ಲಕ್ಷ ದಂಡ ವಿಧಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಇಸ್ಪೀಟ್ ಜೂಜಾಟ: 5 ಮಂದಿ ಬಂಧನ; ₹2,040 ನಗದು ಜಪ್ತಿ
ದಂಡದ ಮೊತ್ತದಲ್ಲಿ ತಲಾ ₹1 ಲಕ್ಷವನ್ನು ರಾಮಪ್ಪನ ಇಬ್ಬರು ಮಕ್ಕಳಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ನಾಗರಾಜ ಮಸ್ಕಿ ಅವರು ವಾದ ಮಂಡಿಸಿದ್ದರು.





