ಶಾಲಾ ಮಕ್ಕಳು ಎಂಬುದನ್ನೂ ನೋಡದೆ ಜಾತಿಯ ಆಧಾರದ ಮೇಲೆ ಊಟದ ಪಂಕ್ತಿಯಿಂದ ಎಬ್ಬಿಸಿ, ಊಟ ನೀಡದೆ ಹೊರಗೆ ಕಳುಹಿಸಿದ ಆರೋಪ ಚಾಮರಾಜನಗರ ತಾಲ್ಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಕೇಳಿಬಂದಿದೆ. ಈ ಸಂಬಂಧ ನಾಲ್ವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 18ರಂದು ಕೆಬ್ಬೇಪುರ ಗ್ರಾಮದಲ್ಲಿ ಬಂಡಿ ಮೆರವಣಿಗೆ ಉತ್ಸವದ ಅಂಗವಾಗಿ ಬಸವೇಶ್ವರ ದೇವಸ್ಥಾನದ ಮುಂಭಾಗ ಶಾಮಿಯಾನ ಹಾಕಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳನ್ನೂ ಊಟಕ್ಕೆ ಆಹ್ವಾನಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಅವರು ಮಕ್ಕಳನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಮಕ್ಕಳು ಊಟದ ಪಂಕ್ತಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಊಟ ಬಡಿಸದೆ ಪಂಕ್ತಿಯಿಂದ ಎಬ್ಬಿಸಿ ಹೊರಗೆ ಕಳುಹಿಸಲಾಗಿದೆ ಎಂದು ಕೆಬ್ಬೇಪುರ ಗ್ರಾಮದ ಕೃಷ್ಣಮೂರ್ತಿ ಅವರು ಬೇಗೂರು ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? E-KYC: ಎಲ್ಲವೂ ‘ಆನ್‌ಲೈನ್’… ಆದರೆ, ಜನರ ಸಂಕಷ್ಟ ಮಾತ್ರ ‘ಆಫ್‌ಲೈನ್’!
ಊಟ ಸಿಗದೆ ಮಕ್ಕಳು ಶಾಲೆಗೆ ಮರಳಿದ್ದು, ಬಳಿಕ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಶಾಲೆಯಲ್ಲೇ ಉಪ್ಪಿಟ್ಟು ತಯಾರಿಸಿ ಮಕ್ಕಳಿಗೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಡಿಬಿ ಕುಪ್ಪೆ-ಬಾವಲಿ ನಡುವಿನ ಕಳಪೆ ರಸ್ತೆ ಕಾಮಗಾರಿ
ಈ ದೂರಿನ ಆಧಾರದ ಮೇಲೆ ಗ್ರಾಮದ ಮಲ್ಲೇಶ್, ಮಹೇಂದ್ರ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸಂಪತ್ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಗಳು ತನಿಖೆಯಲ್ಲಿದ್ದು, ಆರೋಪಿಗಳ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.




