“ಸಾಹಿತ್ಯ ಸೇವೆಗಾಗಿಯೇ ಇರುವ ಸಂಸ್ಥೆಗಳು ಕ್ಷೀಣಿಸಿವೆ. ಈ ಸಂದರ್ಭದಲ್ಲಿ ನಿರಂತರ ಸಾಹಿತ್ಯ ಸಂಭ್ರಮ ಹೊಸ ಆಶಾಭಾವನೆ ಮೂಡಿಸುತ್ತಿದೆ” ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ಗದಗ ನಗರದ ಕೆಎಲ್‌ಸಿ ಸಂಸ್ಥೆಯ ಜೆ.ಟಿ ಮಹಾವಿದ್ಯಾಲಯದ ಸಭಾಭವನದಲ್ಲಿ ರವಿವಾರ ನಿರಂತರ ಪ್ರಕಾಶನ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ಮಹಾವಿದ್ಯಾಲಯದ ಸಂಸ್ಥೆಯ ಕನ್ನಡ ವಿಭಾಗದ ಸಹಯೋಗದಲ್ಲಿ ಸಂಭ್ರಮ ಕಾರ್ಯಕ್ರಮದಲ್ಲಿ ವರು ಮಾತನಾಡಿದರು.
“ಗದಗ ಜಿಲ್ಲೆಯು ಯಾವುದೇ ರಂಗದಲ್ಲಿ ಕಡಿಮೆ ಇಲ್ಲ. ಸಾಹಿತ್ಯ ಸಂಭ್ರಮದಂತಹ ಮೌಲಿಕ ಕಾರ್ಯಕ್ರಮಗಳು ಉತ್ತಮ ಸಂದೇಶ ನೀಡುತ್ತಿದೆ”ಎಂದರು.
ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯದ ಕುಲಸಚಿವ ಅಮರೇಶ ಯಾತಗಲ್ ಮಾತನಾಡಿ, “ಓದುವ ಹವ್ಯಾಸ ಕಡಿಮೆಯಾಗಲು ನೂರಾರು ಕಾರಣ ಇರಬಹುದು. ಆದರೆ, ಕವಿ ಮತ್ತು ಕಾವ್ಯದ ಅಭಿರುಚಿ ಅರಿತವರು ಓದಿನಿಂದ ದೂರವಾಗಲಾರರು. ನೆಲ, ಜಲ, ಸಂಸ್ಕೃತಿಗಾಗಿ ಶ್ರಮಿಸುವವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ” ಎಂದು ತಿಳಿಸಿದರು.
ರಾಜ್ಯಮಟ್ಟದ ನಿರಂತರ ಪ್ರಶಸ್ತಿ ಪ್ರದಾನ: ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ, ಸಮಾಜ ಸೇವಕ ಲತೀಫ್ ಕುನ್ನಿಬಾವಿ, ಕಲಾವಿದ ವಿಜಯ ಕಿರೇಸೂರ, ಗಾಯಕಿ ಪಲ್ಲವಿ ಗಜೇಂದ್ರಗಡ ಅವರಿಗೆ ರಾಜ್ಯಮಟ್ಟದ ನಿರಂತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾನಪದ ಕಲಾವಿದ ಪಾಂಡಪ್ಪ ಲಮಾಣಿ ಅವರನ್ನು ಗೌರವಿಸಲಾಯಿತು.
ಪುಸ್ತಕಗಳ ಬಿಡುಗಡೆ: ಅಕ್ಟರ್ ಸಿ. ಕಾಲಿಮಿರ್ಚಿ ಅವರ ಲಂಕೇಶ್ ಎಂಬ ‘ಬೆರಗು, ಶಾನಭೋಗಪುರ, ಬೆಳಕು ಹಿಡಿವ ಹುಡುಗ, ಕುದುರೆಗಾಡಿ’, ಲಕ್ಷ್ಮೀಬಾಯಿ ಎ. ಪಾಟೀಲ ಅವರ ‘ನಿರುಪಮ’, ಪುಷ್ಪಾವತಿ ಶಲವಡಿಮಠ ಅವರ ‘ಅನುಭಾವ ದೀಪ್ತಿ’, ಜೆ.ಬಿ. ನೂರ್ ಜಹಾನ್ ಬೇಗಂ ಅವರ ‘ಇರದಂತೆ ಇರಬೇಕು’, ಎಸ್.ಎ. ಚೆನ್ನಾಪುರ ಅವರ ‘ನೆಲ ಜಲದ ಕರುಳ ಬಳ್ಳಿ’, ಚಂದ್ರಕಲಾ ಇಟಗಿಮಠ ಅವರ ‘ವಚನ ಲಹರಿ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ನಿರಂತರ ಪ್ರಕಾಶನದ ಪ್ರಕಾಶಕ ಎ.ಎಸ್. ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಂತಕ ಬಿ.ಎ. ಕೆಂಚರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರಘು ಕೊಪ್ಪರ, ಮಹಾವಿದ್ಯಾಲಯ ಪ್ರಾಚಾರ್ಯ ರಾಜೇಶ ನಾಯರಿ, ಕವಿ ಮರುಳಸಿದ್ದಪ್ಪ ದೊಡ್ಡಮನಿ, ನೂರ್ ನಾಗಾನೂರ್, ಬಸವರಾಜ ನೆಲಜೇರಿ, ಆರ್.ಎಫ್. ಲೋಟಗೇರಿ, ನಾಝರಿನ್, ವಕೀಲ ಎಸ್.ಕೆ. ನದಾಫ್ ತಹಸೀಲ್ದಾರ್, ಕೆ.ಆರ್. ಸುಣಗಾರ, ಅಮೀರ್ ನಾಯಕ ಇದ್ದರು.



