ಉತ್ತರ ಕನ್ನಡ: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಹೊಸದಾಗಿ ಹಾಗೂ ನವೀಕರಣ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ www.sw.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ವಿದ್ಯುತ್ ಇಲ್ಲದ ಮನೆಯಿಂದ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನದವರೆಗೆ: ಮಂಕಾಳ ವೈದ್ಯರ ಹೋರಾಟದ ಪಯಣ
ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಹಿಂದಿನ ವರ್ಷದ ಅಂಕಪಟ್ಟಿ, ಆದಾಯ ಪ್ರಮಾಣ ಪತ್ರ, ಶುಲ್ಕ ರಶೀದಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯದ ಮಿತಿ ರೂ.2.50 ಲಕ್ಷ ಎಂದು ತಿಳಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಗದಿತ ಪ್ರಕ್ರಿಯೆಯಂತೆ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್–2) ತಿಳಿಸಿದ್ದಾರೆ.




