ಮಲೆನಾಡಿನಲ್ಲಿ ಮಾನವ – ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ನಿರಂತರವಾಗಿ ಕಾಡುತ್ತಿರುವ ಕಾಡುಪ್ರಾಣಿ ಹಾಗೂ ಆನೆಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಲು ಅರಣ್ಯ ಇಲಾಖೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಪ್ಪಿಸಿ, ಎರಡನ್ನೂ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಲವು ಮಹತ್ವದ ಯೋಜನೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ವರ್ಷ 120 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಆನೆಗಳು ನಾಡಿಗೆ ಬರುವುದನ್ನು ತಡೆಯಲು ಇದು ಪ್ರಮುಖ ಅಸ್ತ್ರವಾಗಲಿದೆ. ಆನೆಗಳ ಮುಕ್ತ ಸಂಚಾರಕ್ಕಾಗಿ ಖಾಸಗಿ ಒಡೆತನದಲ್ಲಿರುವ ಆನೆ ಕಾರಿಡಾರ್ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಇಲಾಖೆ ಮುಂದಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಈ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಅನುದಾನ ಲಭ್ಯತೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಅರಣ್ಯ ಕಚೇರಿ ಉದ್ಘಾಟಿಸಿ ಅರಣ್ಯ ಸಚಿವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು | SIR ಪ್ರಕ್ರಿಯೆ: ಅಂತಿಮ ಪಟ್ಟಿಯಲ್ಲಿ 8,74,462 ಮತದಾರರು; ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ
ಚಿಕ್ಕಮಗಳೂರು, ಹಾಸನ ಸೇರಿದಂತೆ ಆನೆ ಹಾವಳಿ ಹೆಚ್ಚಾಗಿರುವ ಜಿಲ್ಲೆಗಳಿಗೆ ತ್ವರಿತ ಸ್ಪಂದನೆ ಒದಗಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ಬಲವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಪಡೆಗಳ ಜೊತೆಗೆ, ಹೆಚ್ಚುವರಿಯಾಗಿ ನಾಲ್ಕು ಪಡೆಗಳನ್ನು ರಚಿಸಲು ಹಣಕಾಸು ಇಲಾಖೆಯ ಅನುಮೋದನೆಗೆ ಕಾಯಲಾಗುತ್ತಿದ್ದು, ಒಟ್ಟು ಎಂಟು ಪಡೆಗಳು ಶೀಘ್ರದಲ್ಲೇ ಕಾರ್ಯಾಚರಣೆಗಿಳಿಯಲಿವೆ ಎಂದು ಸಚಿವರು ತಿಳಿಸಿದರು.





