ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಪರಿಷ್ಕರಣೆಯ ಬಳಿಕ ಜಿಲ್ಲೆಯಲ್ಲಿ ಒಟ್ಟು 8,74,462 ಮತದಾರರು ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ 1,230 ಮತಗಟ್ಟೆಗಳಿದ್ದು, ಹೆಚ್ಚುವರಿಯಾಗಿ 25 ಮತಗಟ್ಟೆಗಳನ್ನು ಪ್ರಸ್ತಾಪಿಸಿ ಸೇರಿಸಲಾಗಿದೆ. ಇದರಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 1,255ಕ್ಕೆ ತಲುಪಿದೆ. ಸೇವಾ ಮತದಾರರ ಸಂಖ್ಯೆಯೂ ಕರಡು ಪಟ್ಟಿಯಲ್ಲಿದ್ದ 410ರಿಂದ ಅಂತಿಮ ಪಟ್ಟಿಯಲ್ಲಿ 411ಕ್ಕೆ ಏರಿಕೆಯಾಗಿದೆ.
ಜೂನ್ 30ರಿಂದ ಆಗಸ್ಟ್ 17ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ನಡೆಸಿದ್ದಾರೆ. ಕರಡು ಪಟ್ಟಿಯಲ್ಲಿದ್ದ 9,60,231 ಮತದಾರರ ಪೈಕಿ ಗೈರು, ಸ್ಥಳಾಂತರ, ಮರಣ ಹಾಗೂ ಇತರ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟ 96,715 ಜನರ ಪೈಕಿ 91,610 ಮಂದಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ಬಳಿಕ 2,041 ಮಂದಿಯನ್ನು ಅನರ್ಹರೆಂದು ಪರಿಗಣಿಸಿ ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.
ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಳಿಸುವಿಕೆಗೆ ಸಂಬಂಧಿಸಿದ ನಮೂನೆ 6, 7 ಮತ್ತು 8ರ ಅಡಿಯಲ್ಲಿ ಬಂದ ಅರ್ಜಿಗಳನ್ನು ಸೆಪ್ಟೆಂಬರ್ 23ರೊಳಗೆ ವಿಲೇವಾರಿ ಮಾಡಲಾಗಿದೆ. ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 10,946 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪ್ರಜಾಪ್ರಭುತ್ವ ಮರಳಿ ಪಡೆಯಲು ಜನತಾ ಮೆರವಣಿಗೆ: ಮೋದಿ ಸರ್ಕಾರಕ್ಕೆ ಸಂಘಟಕರ ಸವಾಲು
ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿಯ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳಿಗೂ ನೀಡಲಾಗಿದೆ ಎಂದು ತಿಳಿಸಿದ್ದಾರೆ.





