ಜೀವನೋಪಾಯಕ್ಕಾಗಿ 2ರಿಂದ 3 ಎಕರೆ ಸಾಗುವಳಿ ಮಾಡಿಕೊಂಡಿರುವ ಬಡ ಸಾಗುವಳಿದಾರರನ್ನು ಹೊರತುಪಡಿಸಿ ಭೂಮಾಲೀಕರ ಅರಣ್ಯ ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಿ ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಗತಿಪರ ಸಂಘಟನೆಯಿಂದ ಚಿಕ್ಕಮಗಳೂರು ತಾಲೂಕು ಕಚೇರಿಯಿಂದ ಅಜ಼ಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನೆ ನಡೆಸಿದರು.
“ಸರ್ವಾಡಳಿತ ನಡೆಸುತ್ತ ಭಾರೀ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಬಹುರಾಷ್ಟ್ರೀಯ ಕಂಪೆನಿಗಳ ಲೂಟಿಕೋರ ನೀತಿಯಿಂದಾಗಿ ಪರಿಸರ ಸಂಪೂರ್ಣ ವಿನಾಶದ ಅಂಚಿಗೆ ತಲುಪಿದೆ. ಇದೇ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ. ಭಾರೀ ಬಂಡವಾಳಶಾಹಿಗಳು, ಭೂಗಳ್ಳರಿಂದ ಪ್ರಕೃತಿಯ ಮೇಲೆ ಅತ್ಯಾಚ್ಯಾರ ನಡೆಯುತ್ತಿದ್ದು, ಖಾಸಗೀಕರಣ, ಉದಾರೀಕರಣದ ಮೂಲಕ ದೇಶದ ಸಂಪತ್ತಿನ ಲೂಟಿಗೆ ದಾರಿ ಮಾಡಿಕೊಟ್ಟಿರುವ ಆಳುವ ಪಕ್ಷಗಳು ನೇರ ಹೊಣೆಗಾರರಾಗಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘಟನೆಯ ಸುರೇಶ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಗಿರಿಶ್ರೇಣಿ, ಬೆಟ್ಟಗುಡ್ಡಗಳಲ್ಲಿ ಜೀವವೈವಿಧ್ಯ ಸೃಷ್ಟಿಸುವ ಪಶ್ಚಿಮಘಟ್ಟಗಳಲ್ಲಿ ರೆಸಾರ್ಟ್, ಹೋಂ ಸ್ಟೇ, ಹೆದ್ದಾರಿಗಳಿಗೆ ಅನುಮತಿ ನೀಡಿ ಬೆಟ್ಟಗುಡ್ಡಗಳು ನಾಶವಾಗಿ ಪ್ರಾಕೃತಿಕ ಸಮತೋಲನದಿಂದ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗಿ ಮಾನವ ಸಂತಾನ ಒಳಗೊಂಡಂತೆ ಇಡೀ ಜೀವಸಂಕುಲವೇ ವಿನಾಶದ ಅಂಚಿಗೆ ಬಂದುನಿಂತಿವೆ. ಪ್ರಕೃತಿ ನಾಶದ ಲಾಭವನ್ನು ಬಂಡವಾಳಶಾಹಿಗಳು ಅನುಭವಿಸಿದರೆ, ಅದರ ನಷ್ಟ ಮತ್ತು ಆಕ್ರೋಶವನ್ನು ಜನಸಾಮಾನ್ಯರು ಅನುಭವಿಸುವಂತಾಗಿದೆ” ಎಂದರು.
“2009-10ರಲ್ಲಿ ಸರ್ಕಾರವೇ ನೇಮಿಸಿದ್ದ ಪರಿಸರ ತಜ್ಞ ಡಾ. ಮಾಧವ ಗಾಡ್ಗೀಳ್ ವರದಿಯನ್ನು ತಿರಸ್ಕಾರ ಮಾಡಲಾಯಿತು. ಬದಲಿಗೆ ಬಂಡವಾಳಶಾಹಿಗೆ ಅನುಕೂಲವಾದ ಕಸ್ತೂರಿ ರಂಗನ್ ವರದಿಯನ್ನು ತಯಾರು ಮಾಡಿಸಲಾಯಿತು. ಪ್ರಾಕೃತಿಕ ಅವಘಡಗಳಿಗೆ ಮಾಧವ ರಾಷ್ಟ್ರೀಯ ವರದಿಯನ್ನು ತಿರಸ್ಕರಿಸಿದ್ದೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ. ಕೇರಳದಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಪಶ್ಚಿಮಘಟ್ಟ ಪ್ರದೇಶವನ್ನು ಕಾಪಾಡಬೇಕಾದರೆ ಗಾಡ್ಗೀಳ್ ವರದಿ ಜಾರಿಯಾಗಬೇಕಾಗಿದೆ. ಜತೆಗೆ ಕರ್ನಾಟಕದ ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗಾಜನೂರು ತುಂಗಾ ಡ್ಯಾಮ್‌ನಲ್ಲೂ ಕ್ರಸ್ಟ್‌ಗೇಟ್ ರೋಪ್ ಜಾಮ್; ಅನಾಹುತವಾದಲ್ಲಿ ಹೊಣೆ ಯಾರು?
ಸಂದರ್ಭದಲ್ಲಿ ಉಮೇಶ್ ಕುಮಾರ್, ಜೆ ಡಿ ಪರಮೇಶ್, ಸುರೇಶ ಗಾಡಿಪೇಟೆ, ಪದ್ಮನಾಭ, ಉಮೇಶ್ ಕೆಳವಾಲ, ಸುರೇಶ ಸಿ ಬಿ, ಪ್ರೇಮ್ ಕುಮಾರ್, ಪೂರ್ಣೇಶ್, ನಿಂಗಯ್ಯ, ಪುಟ್ಟಸ್ವಾಮಿ ಕಣತಿ, ಸುಂದರೇಶ್, ಗುರುವಯ್ಯ, ಜೆ ಡಿ ಕುಮಾರ್ ಸೇರಿದಂತೆ ಬಹುತೇಕರು ಇದ್ದರು.