ಅಪಘಾತಕ್ಕೀಡು ಮಾಡಿ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತೇವೆಂದು ನಂಬಿಸಿ, ಆನಂತರ ಹಣ ನೀಡದೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಹೊಸಪೇಟೆಯಿಂದ ಕಂಬಿಹಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿರೇಬಿದರೆ ನಿವಾಸಿ ರತ್ನ ಎಂಬುವವರ ಮಗ ಅರುಣ್.ಎಸ್ ಎಂಬುವವರಿಗೆ ಅಪಘಾತವಾಗಿತ್ತು. ಕಬ್ಬಿಣ ಸೇತುವೆ ಗ್ರಾಮದ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿಯ ತಿರುವಿನಲ್ಲಿ ಬೈಕ್ ಚಾಲಕ ಗಿರೀಶ್. ಎ ಎಂಬಾತ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಬೈಕ್ ಉರುಳಿಸಿದ್ದರಿಂದ, ಹಿಂಬದಿ ಸವಾರ ಅರುಣ್ ತಲೆ ಹಾಗೂ ಕೈಕಾಲುಗಳಿಗೆ ತೀವ್ರ ರಕ್ತಗಾಯಗಳಾಗಿದ್ದವು. ಸದ್ಯ ಅರುಣ್ ಹಾಸನದ ಎಂ.ಎಂ.ಎಂ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಸಮಯದಲ್ಲಿ ಚಿಕಿತ್ಸಾ ವೆಚ್ಚ ನೋಡುವುದಾಗಿ ಒಪ್ಪಿಕೊಂಡಿದ್ದ ಗಿರೀಶ್, ಈಗ ತನ್ನ ಬಳಿ ಹಣವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದರಿಂದ ಗಾಯಾಳುವಿನ ತಾಯಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮುಗುಳುವಳ್ಳಿ ಗ್ರಾಮದ ಗಾರೆ ಕೆಲಸಗಾರ ಲೋಕೇಶ ಎಂಬುವವರು ಜೂನ್ 4ರಂದು ಮಧ್ಯಾಹ್ನ ಕವನ್ ಎಂಬುವವರ ಬೈಕ್ ಹಿಂಬದಿ ಕುಳಿತು ಬಂಡೀಹಳ್ಳಿ ಸಮೀಪ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಅತಿವೇಗವಾಗಿ ಬಂದ ಮಂಜೇಗೌಡ ಎಂಬುವವರ ಬೈಕ್ ಇವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಲೋಕೇಶ ಅವರ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪೋಕ್ಸೋ; ಶಿಕ್ಷಕನ ಮೇಲೆ ಪ್ರಕರಣ ದಾಖಲು
ಆಸ್ಪತ್ರೆ ಖರ್ಚು ಕೊಡುವುದಾಗಿ ಭರವಸೆ ನೀಡಿದ್ದ ಬೈಕ್ ಚಾಲಕ ಮಂಜೇಗೌಡ, ಈಗ ಹಣ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಲೋಕೇಶ ಅವರ ಪತ್ನಿ ಸುಮಾ ಜೂನ್ 21ರಂದು ಗ್ರಾಮಾಂತರ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದು, ಇಬ್ಬರು ಬೈಕ್ ಚಾಲಕರ ವಿರುದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.




