ಕಳೆದವಾರ ಅಪ್ರಾಪ್ತ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿತ್ತು.
ಕಾಮುಕ ಶಿಕ್ಷಕ ಮೂವರು ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ವಿಚಿತ್ರ ಪ್ರಶ್ನೆಗಳನ್ನು ಕೇಳಿ ವಿಕೃತಿ ಮೆರೆದಿದ್ದ. ಹೀಗಾಗಿ ಶಿಕ್ಷಕನ ಅಸಭ್ಯ ವರ್ತನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಕ್ಕಳ ಮೇಲಿನ ಈ ಲೈಂಗಿಕ ದೌರ್ಜನ್ಯ ಪ್ರಕರಣವು ಪೋಕೋ ಕಾಯ್ದೆಯಡಿ ಬರುವ ಗಂಭೀರ ಅಪರಾಧವಾಗಿದ್ದರೂ, ಇದನ್ನು ಕಾನೂನು ಕ್ರಮಕ್ಕೆ ಒಪ್ಪಿಸದೆ ಸ್ಥಳೀಯವಾಗಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಸೂಕ್ಷ್ಮ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ, ಪೊಲೀಸರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಜಂಟಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದರು.
ಆದರೆ ಈ ಸಭೆಯ ನಡುವೆಯೇ ನಂದೀಶ್ ಎಂಬಾತ, ಕಾಮುಕ ಶಿಕ್ಷಕನ ಮೇಲಿನ ಅಪರಾಧಕ್ಕೆ ಕಾನೂನು ಕ್ರಮ ಜರುಗಿಸುವುದು ಬೇಡ, ಇಲ್ಲೇ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸೋಣ ಎಂದು ಹಠ ಹಿಡಿದಿದ್ದ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ಕಟುಕ ಶಿಕ್ಷಕನಿಗೆ ಶಿಕ್ಷೆಯಾಗಬೇಕು, ಯಾವುದೇ ಕಾರಣಕ್ಕೂ ರಾಜಿ ಸಂಧಾನ ಮಾಡಿಕೊಳ್ಳಬಾರದು ಎಂದು ಕಾರಣಕ್ಕೂ ರಾಜಿ ಸಂಧಾನ ಮಾಡಿಕೊಳ್ಳಬಾರದು ಎಂದು ಪಟ್ಟು ಹಿಡಿದಿದ್ದ ತಿಪ್ಪೇಶ್ ಎಂಬವರ ಮೇಲೆ ನಂದೀಶ್ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದಲ್ಲದೆ, ನ್ಯಾಯಕ್ಕಾಗಿ ಆಗ್ರಹಿಸಿದವರ ಮೇಲೆಯೇ ಹಲ್ಲೆ ನಡೆಸಿರುವುದು ಇದೀಗ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮನನೊಂದು ಯುವಕ ಸಾವು
ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ತಿಪ್ಪೇಶ್ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಭವಿಷ್ಯದೊಂದಿಗೆ ಆಟವಾಡಿ ವಿಕೃತಿ ಮೆರೆದ ಶಿಕ್ಷಕನಿಗೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆಯಾಗಬೇಕು ಮತ್ತು ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಈ ಕುರಿತು ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




