ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಆರಂಭದಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿದ್ದ ಜಿಲ್ಲೆಯಲ್ಲಿ ಇದೀಗ ಮಳೆರಾಯನ ಅಬ್ಬರ ತೀವ್ರಗೊಂಡಿದೆ.
ಶೃಂಗೇರಿ ತಾಲೂಕು ನೆರೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ನಿರಂತರ ವರುಣಾರ್ಭಟದಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಮೈದುಂಬಿ ಉಕ್ಕಿ ಹರಿಯುತ್ತಿದ್ದು, ಜಲಾನಯನ ಪ್ರದೇಶಗಳಲ್ಲಿ ನೆರೆ ಭೀತಿ ಆವರಿಸಿದೆ. ನದಿಯ ಈ ರೌದ್ರರಮಣೀಯ ರೂಪ ಹಾಗೂ ಪ್ರಕೃತಿಯ ಅಪ್ರತಿಮ ಸೌಂದರ್ಯ ಡೋನ್ ಕ್ಯಾಮರಾದಲ್ಲಿ ಅತ್ಯಂತ ಆಕರ್ಷಕವಾಗಿ ಸೆರೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಂತ್ರಿಗಿರಿ ಪಟ್ಟಿಯಲ್ಲಿ ಶಾಂತೇಗೌಡ; ನಿರಾಸೆಯಾಗಿದ್ದೇಕೆ?
ಶೃಂಗೇರಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು, ಇಡೀ ಪ್ರದೇಶವೇ ವಿಶಾಲ ಸರೋವರದಂತೆ ಕಂಗೊಳಿಸುತ್ತಿದೆ. ಸುತ್ತಲಿನ ಕಡು ಹಸಿರಿನ ಕಾನನ, ಮೋಡ ಕವಿದ ಮುಸುಕಿನ ವಾತಾವರಣ ಮತ್ತು ರಭಸವಾಗಿ ಹರಿಯುವ ನದಿಯ ನೀರು ಇಡೀ ಶೃಂಗೇರಿ ಪಟ್ಟಣಕ್ಕೆ ವಿಶಿಷ್ಟ ಕಳೆ ತಂದಿದೆ. ನದಿ ಅಪಾಯದ ಹಂತ ಮೀರಿ ಹರಿಯುತ್ತಿದ್ದರೂ, ಕಾಲುಸೇತುವೆ ಮೇಲೆ ನಿಂತು ಉಕ್ಕಿ ಹರಿಯುವ ತುಂಗೆಯ ವೈಭವವನ್ನು ಭಕ್ತರು ಹಾಗೂ ಪ್ರವಾಸಿಗರು ನೋಡಿ ಆನಂದಿಸುತ್ತಿದ್ದಾರೆ.




