ಚಿಕ್ಕಮಗಳೂರು | ಇಎಸ್‌ಎ ಕರಡು ಅಧಿಸೂಚನೆ: ಅಧಿವೇಶನಗಳಲ್ಲಿ ದನಿ ಎತ್ತದ ಜನಪ್ರತಿನಿಧಿಗಳಿಗೆ ಘೇರಾವ್ ಎಚ್ಚರಿಕೆ

Date:

ಪಶ್ಚಿಮಘಟ್ಟಗಳ ಸಾಲಿನಲ್ಲಿ ಸ್ಯಾಟಲೈಟ್ ಮೂಲಕ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಕರಡು ಅಧಿಸೂಚನೆ ಕುರಿತು ಚಿಕ್ಕಮಗಳೂರು ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಹಾಗೂ ಜಿಲ್ಲಾ ಬೆಳೆಗಾರರ ಒಕ್ಕೂಟಗಳಿಂದ “ಸಂಸತ್ ಹಾಗೂ ರಾಜ್ಯದ ಅಧಿವೇಶನದಲ್ಲಿಯೂ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಮಾತನಾಡದ ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವುದರೊಂದಿಗೆ ಮಲೆನಾಡು ಬಂದ್‌ಗೆ ಕರೆ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದವು.

- Advertisement -

ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಸಂಚಾಲಕ ಎಸ್ ವಿಜಯ್‌ಕುಮಾರ್ ಈ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವ 137 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ಜಿಲ್ಲೆಯ ಜನತೆ ಮತ್ತು ವಿವಿಧ ಸಂಘಟನೆಗಳು ಆಕ್ಷೇಪವನ್ನೂ ಸಲ್ಲಿಸಿವೆ. ಆದರೆ, ಈ ಆಕ್ಷೇಪಗಳನ್ನು ಪರಿಗಣಿಸದೆ ಕೇಂದ್ರ ಸರ್ಕಾರ ನಿಯೋಜಿಸಿದ್ದ ಸಂಜಯ್‌ಕುಮಾರ್ ಕುಮಾರ್ ನೇತೃತ್ವದ ಸಮಿತಿ ಕರ್ನಾಟಕದ ಯಾವುದೇ ಬಾಧಿತ ಪ್ರದೇಶಗಳಿಗೆ ಭೇಟಿ ನೀಡದೆ, ಜನರ ಅಹವಾಲು ಆಲಿಸಿ ಪರಿಶೀಲನೆಯನ್ನೂ ಮಾಡದೆ 7ನೇ ಬಾರಿಗೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ.‌ ಪರಿಣಾಮವಾಗಿ ಜಿಲ್ಲೆಯ ಮಲೆನಾಡು ಭಾಗದ 137 ಗ್ರಾಮಗಳ ಜನತೆ ತೀವ್ರ ಆತಂಕದಲ್ಲಿ ಬದುಕುವಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ಚಿಕ್ಕಮಗಳೂರು ಜಿಲ್ಲಾದ್ಯಂತ ಶೇ.42ರಷ್ಟು ಅಧಿಕೃತ ಅರಣ್ಯ ಪ್ರದೇಶವಿದ್ದು, ಸುಮಾರು 56,200 ಹೆಕ್ಟರ್ ಡೀಮ್ಸ್ ಪ್ರದೇಶ ಸಮಸ್ಯೆಯಲ್ಲಿದೆ. ಇದರೊಂದಿಗೆ ಸುಮಾರು 1 ಲಕ್ಷಕ್ಕೂ ಅಧಿಕ ಹೆಕ್ಟೇರ್‌ಗೂ ಹೆಚ್ಚು ಸೆಕ್ಷನ್ 4(1) ಮೀಸಲು ಅರಣ್ಯ ಅಧಿಸೂಚನೆ ಪ್ರಗತಿಯಲ್ಲಿದೆ. ಒಂದಲ್ಲಾ ಒಂದು ರೀತಿಯ ಅರಣ್ಯ ಮತ್ತು ಕಂದಾಯ ಸಮಸ್ಯೆಗಳಿಂದ ನರಳುತ್ತಿರುವ ಜಿಲ್ಲೆಯ ಜನರಿಗೆ ಪರಿಸರ ಸೂಕ್ಷ್ಮ ಪ್ರದೇಶ ವರದಿಯು ಮತ್ತಷ್ಟು ಆತಂಕ ತಂದೊಡ್ಡಿದೆ. ಈ ಕರಡು ವರದಿ ಸಂಬಂಧ ಜಿಲ್ಲೆಯ ಜನರ ಆಕ್ಷೇಪಗಳನ್ನು ಪರಿಗಣಿಸಿ ಕಸ್ತೂರಿ ರಂಗನ್ ವರದಿ(ಪರಿಸರ ಸೂಕ್ಷ್ಮ ಪ್ರದೇಶ) ವ್ಯಾಪ್ತಿಯಿಂದ ಆಗಬಹುದಾದ ಸಮಸ್ಯೆಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಬಗೆಹರಿಸಬೇ‌ಕು” ಕೆಂದು ಒತ್ತಾಯಿಸಿದ್ದರು.

“ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ನಮ್ಮ ರಾಜ್ಯದ ಸುಮಾರು 20,658 ಚ.ಕಿ.ಮೀ. ಪ್ರದೇಶಗಳಲ್ಲಿ ಇರುವ ಜನವಸತಿಗಳನ್ನು ಮತ್ತು ಸ್ವಾಭಾವಿಕ ಅರಣ್ಯವನ್ನು ಭೌತಿಕ ಸರ್ವೇ ಮಾಡಿಸಿ ಅರಣ್ಯ ಹಾಗೂ ಗ್ರಾಮಗಳ ಗಡಿ ಗುರುತು ಮಾಡಿಕೊಡುವ ಹೊಣೆ ಹೊತ್ತುಕೊಳ್ಳಬೇಕು. ಅಲ್ಲಿಯವರೆಗೂ ಕರಡು ಅಧಿಸೂಚನೆ ಜಾರಿಯಾಗದಂತೆ ಸಮಯಾವಕಾಶ ಕೋರಿ ಕಾಲಾವಕಾಶ ಪಡೆಯಬೇಕು. ಪಶ್ಚಿಮಘಟ್ಟ ವ್ಯಾಪ್ತಿಯ ಎಲ್ಲ ಚುನಾಯಿತ ಶಾಸಕರು ವಿಧಾನ ಪರಿಷತ್ ಸದಸ್ಯರು, ಲೋಕಾಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಸಭೆ ಆಯೋಜಿಸಿ ಸಾಧಕ-ಭಾದಕಗಳನ್ನು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು” ಎಂದು ಆಗ್ರಹಿಸಿದ್ದರು.

“ಪರಿಸರ ಸೂಕ್ತ ವಲಯ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿರುವ ನಕ್ಷೆಯು ಉಪಗ್ರಹ ಆಧಾರಿತವಾಗಿದ್ದು, ಇದರಿಂದ ಇಲ್ಲಿನ ಕಾಫಿ ತೋಟ, ಅಡಿಕೆ ತೋಟ, ರಬ್ಬರ್ ತೋಟ ಸೇರಿದಂತೆ ತೋಟಗಾರಿಕೆ ಬೆಳೆಗಳು ಇರುವ ಭೂಮಿ ಅರಣ್ಯ ವ್ಯಾಪ್ತಿಯ ನಕಾಶೆಯೊಳಗಿದೆ. ಇದನ್ನು ಸರಿಪಡಿಸಲು ಭೌತಿಕವಾಗಿ ಭೂ ಮಾಪನ ಅಧಿಕಾರಿಗಳನ್ನು ನಿಯೋಜಿಸಿ ಅರಣ್ಯ ಮತ್ತು ಗ್ರಾಮದ ಗಡಿ, ಅರಣ್ಯ ಹಾಗೂ ತೋಟಗಳ ಗಡಿ, ಸೇರಿದಂತೆ ಅಧಿಕೃತ ಸ್ವಾಭಾವಿಕ ಅರಣ್ಯದ ಗಡಿ ಗುರುತು ಮಾಡಿಸಿ ರೈತರ ಜಮೀನು, ಗ್ರಾಮಗಳು, ಶಾಲೆ, ಆಟದ ಮೈದಾನ, ಸ್ಮಶಾನಗಳನ್ನು ಗುರುತಿಸಿದ ಬಳಿಕ ಸೀಮಿತ ಪ್ರದೇಶಗಳಿಗೆ ಮಾತ್ರ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸಬೇಕು” ಎಂದು ಒತ್ತಾಯಿಸಿದ್ದರು.

ಕೆಜಿಎಫ್ ಸಂಘಟನೆಯ ಜಿಲ್ಲಾಧ್ಯಕ್ಷ ರತೀಶ್ ಮಾತನಾಡಿ, “ಸರ್ಕಾರ ಭೂಹೀನರಿಗಾಗಿ ಮಂಜೂರು ಮಾಡಲಾಗುವ ನಮೂನೆ 50, 53, 57ರಲ್ಲಿ ಸಲ್ಲಿಕೆಯಾಗಿರುವ ರೈತರ ಅರ್ಜಿಗಳು ಮತ್ತು 94(ಸಿ)ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಕ್ರಮಗೊಳಿಸಿದ‌ ನಂತರವೇ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸಬೇಕು. ಸ್ವಾಭಾವಿಕ ಅರಣ್ಯದ ಗಡಿಯಿಂದ ಬಫರ್ ಝೋನನ್ನು ಝೀರೋ (0) ಕಿ.ಮೀ. ಗೆ ನಿಗದಿಗೊಳಿಸಬೇಕು” ಎಂದು ಆಗ್ರಹಿಸಿದ್ದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, “ಪರಿಸರ ಸೂಕ್ಷ್ಮ ವಲಯದ ಅಕ್ಕ-ಪಕ್ಕದಲ್ಲಿ ಬರುವ ಹಳ್ಳಿಗಳಿಗೆ ಮತ್ತು ರೈತರ ಬೆಳೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಧಿಷ್ಟ ನಿರ್ಬಂಧ ಹೇರದಂತೆ ರೈತರಿಗೆ ಮತ್ತು ಹಳ್ಳಿಯ ಅಭಿವೃದ್ಧಿಗೆ ಸ್ವಾಯತ್ತತೆ ನೀಡಬೇಕು. ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷವಾಗದಂತೆ ಅಧಿಕೃತ ಅರಣ್ಯ ಪ್ರದೇಶ(ಸ್ವಾಭಾವಿಕ ಅರಣ್ಯ)ಗಳಿಗೆ ಸೋಲಾರ್ ಬೇಲಿ, ಆನೆ ಟ್ರಂಚ್‌ಗಳು, ರೈಲ್ವೆ ಬ್ಯಾರಿಕೇಡ್‌ಗಳಂತಹ ಬೇಲಿಗಳನ್ನು ರಚಿಸಿ ರೈತರು, ಗ್ರಾಮಸ್ಥರ ಪ್ರಾಣ ಹಾಗೂ ಬೆಳೆ ಹಾನಿಯ ಆತಂಕದಿಂದ ರಕ್ಷಿಸಬೇಕು. ಇನಾಂ ಭೂಮಿ, ಸೊಪ್ಪಿನಬೆಟ್ಟ ಭೂಮಿಗಳ ಸಮಸ್ಯೆ, ಭದ್ರಾ ಹಿನ್ನೀರಿನ ರೈತರ ಪುನರ್ವಸತಿ ಸಮಸ್ಯೆ, ಮಸಗಲಿ ಅರಣ್ಯ ಭೂಮಿ ಸಮಸ್ಯೆಗಳಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದ ನಂತರ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಹೊರಡಿಸಬೇಕು” ಎಂದಿದ್ದರು.

ಈ ವೇಳೆ ಮುಖಂಡರಾದ ಕೆ ಮಹೇಶ್, ಕೆ ಕೆ ರಘು, ಮೋಹನ್‌ಕುಮಾರ್, ರವಿ ಕಾಮೇನಹಳ್ಳಿ, ಕುಮಾರಸ್ವಾಮಿ, ಕುಮಾರ್, ಸುಪ್ರೀತ್, ರಚನ್ ಸೇರಿದಂತೆ ಇತರರು ಇದ್ದರು.

ಕರಡು ಅಧಿಸೂಚನೆ ತಿರಸ್ಕರಿಸುವುದಾಗಿ ಸಚಿವರ ಹೇಳಿಕೆ

ರಾಜ್ಯದ 1,449 ಹಳ್ಳಿಗಳಲ್ಲಿ ಹರಡಿರುವ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಳ್ಳುವ ಪರಿಸರ ಸೂಕ್ಷ್ಮ ಪ್ರದೇಶ(ESA) ಪ್ರಸ್ತಾವನೆಯನ್ನು ಪ್ರಸ್ತಾಪಿಸಿ ಕೇಂದ್ರ ಹೊರಡಿಸಿದ ಇತ್ತೀಚಿನ ಕರಡು ಅಧಿಸೂಚನೆಯನ್ನು ತಿರಸ್ಕರಿಸುವುದಾಗಿ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯು ಪಶ್ಚಿಮ ಘಟ್ಟದ ರೈತರು ಹಾಗೂ ಅಲ್ಲಿನ ಜನರ ಪಾಲಿಗೆ ‘ಮರಣದಂಡನೆಯಂತಿದೆ’ ಎಂದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪಕ್ಷಭೇದ ಮರೆತು ವಿಧಾನಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ ಬಳಿಕ ಗುರುವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, “ರಾಜ್ಯ ಸರ್ಕಾರ ಈ ಕರಡನ್ನು ಒಪ್ಪುವುದಿಲ್ಲ ಹಾಗೂ ಕೇಂದ್ರಕ್ಕೆ ತನ್ನ ಆಕ್ಷೇಪವನ್ನು ಅಧಿಕೃತವಾಗಿ ತಿಳಿಸಲಿದೆ” ಎಂದಿದ್ದಾರೆ.

2013ರ ಕಸ್ತೂರಿರಂಗನ್ ವರದಿ 

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಕ್ರಮಗಳನ್ನು ಶಿಫಾರಸು ಮಾಡಲು ಕೇಂದ್ರ ಸರ್ಕಾರ ವಿಜ್ಞಾನಿ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2013ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಒಟ್ಟು 56,000 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವಂತೆ ಶಿಫಾರಸು ಮಾಡಲಾಗಿತ್ತು. ಈ ಪೈಕಿ ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶವೂ ಸೇರಿತ್ತು.

ಕಸ್ತೂರಿರಂಗನ್ ಸಮಿತಿಯ ವರದಿಯ ಆಧಾರದ ಮೇಲೆ ಕೇಂದ್ರದ ಪರಿಸರ, ಪರಿಸರ ವಿಜ್ಞಾನ ಮತ್ತು ಅರಣ್ಯ ಸಚಿವಾಲಯವು  ಪರಿಸರ ಸೂಕ್ಷ್ಮ ಪ್ರದೇಶ (ESA) ಘೋಷಣೆಗೆ ಸಂಬಂಧಿಸಿ ಇದುವರೆಗೆ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿತ್ತು. ಆದರೆ ಅವು ಅಂತಿಮಗೊಳ್ಳುವ ಮುನ್ನವೇ ಅವಧಿ ಮುಗಿದಿದ್ದರಿಂದ ಇದೀಗ ಏಳನೇ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿವರಿಸಿದರು.

ಗಣಿಗಾರಿಕೆ, ಕಲ್ಲುಗಣಿಗಾರಿಕೆಗೆ ನಿರ್ಬಂಧ

ಕರಡು ಅಧಿಸೂಚನೆಯ ಪ್ರಕಾರ ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳಾದ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಕೆಲವು ನಿರ್ಮಾಣ ಚಟುವಟಿಕೆಗಳು ಹಾಗೂ ಪಟ್ಟಣಗಳ ಅಭಿವೃದ್ಧಿಗೆ ನಿರ್ಬಂಧಗಳನ್ನು ವಿಧಿಸುವ ಪ್ರಸ್ತಾವವಿದೆ. ನಿರ್ದಿಷ್ಟ ಮಿತಿಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ ಈ ನಿರ್ಬಂಧಗಳು ಜಾರಿಯಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗದಗ | ಬೆಳೆ ನಷ್ಟ ಪರಿಹಾರಕ್ಕೆ ದತ್ತಾಂಶ, ಜಂಟಿ ಕ್ಷೇತ್ರ ಸಮೀಕ್ಷೆಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಸೂಚನೆ

10 ಜಿಲ್ಲೆಗಳ 1,449 ಗ್ರಾಮಗಳು

ಕರ್ನಾಟಕದಲ್ಲಿ ಪ್ರಸ್ತಾವಿತ  ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಟ್ಟು 10 ಜಿಲ್ಲೆಗಳ 39 ತಾಲ್ಲೂಕುಗಳ 1,449 ಗ್ರಾಮಗಳು ಸೇರುತ್ತವೆ. ಈ ಪಟ್ಟಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಶಿವಮೊಗ್ಗ,  ಬೆಳಗಾವಿ ಜಿಲ್ಲೆಗಳು ಸೇರಿವೆ. ಕರಡು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ರಾಜ್ಯಗಳು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ರಾಮಲಿಂಗಾರೆಡ್ಡಿ ವಿಧಾನಸಭೆಗೆ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬರದ ಹೊಡೆತಕ್ಕೆ ಬೆಳೆ ನಿರ್ನಾಮ! ಎಕರೆಗೆ ರೂ.30 ಸಾವಿರ ಖರ್ಚು, ಕೈ ಸೇರದ ಫಸಲು

ಬಾಗಲಕೋಟೆ ಜಿಲ್ಲೆಯ ರೈತರು ಬಿತ್ತನೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ರೂ.25ರಿಂದ...

SIR | ಮಲ್ಲೇಶ್ವರಂನಲ್ಲಿ ಬಿಜೆಪಿಯಿಂದ ಭಾರೀ ಅಕ್ರಮ; ಮೇಲಧಿಕಾರಿಗಳೇ ಶಾಮೀಲು ಶಂಕೆ- ʼಈ ದಿನʼಕ್ಕೆ ಸಿಕ್ಕಿದೆ ಸಾಕ್ಷ್ಯ

ಬಿಜೆಪಿಯ ಬಿಎಲ್‌ಎಗಳು ಸಲ್ಲಿಸಿರುವ ಅರ್ಜಿಗಳಲ್ಲಿ ನೂರಕ್ಕೆ ನೂರು ಹೆಸರುಗಳು ಮುಸ್ಲಿಮರದ್ದು. ಕಳೆದ...

ಸಾಗರ | ಡಾ. ಹೆಚ್. ಗಣಪತಿಯಪ್ಪ ಸ್ಮಾರಕ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ದಿವಂಗತ ಹೆಚ್.ಗಣಪತಿಯಪ್ಪ...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...