ಹೆಣ್ಣು ಮಗುವಿನ ರಕ್ಷಣೆ ಹಾಗೂ ಭ್ರೂಣಹತ್ಯೆ ತಡೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮ ಪಂಚಾಯಿತಿ ವಿನೂತನ ಹೆಜ್ಜೆ ಇಟ್ಟಿದೆ. ‘ಮನೆ ಮಹಾಲಕ್ಷ್ಮಿ’ ಯೋಜನೆಗೆ ಆ.15ರಂದು ಚಾಲನೆ ನೀಡಲಾಗಿದ್ದು, ಪಂಚಾಯಿತಿಗೆ ಬರುವ ತೆರಿಗೆ ಹಣವನ್ನೇ ಯೋಜನೆಗೆ ಬಳಸಲಾಗುತ್ತಿದೆ.
ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಮಗುವಾಗಿ ಹೆಣ್ಣು ಮಗು ಜನಿಸಿದ ಕುಟುಂಬಕ್ಕೆ ₹5 ಸಾವಿರ ಧನಸಹಾಯ ನೀಡಲಾಗುತ್ತದೆ. ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವುದು ಹಾಗೂ ಗ್ರಾಮ ಮಟ್ಟದಲ್ಲೇ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ.
ತೆರಿಗೆ ಹಣವನ್ನು ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಬಳಸಿರುವ ಪಂಚಾಯಿತಿಯ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೆಣ್ಣು ಮಗುವಿನ ಜನನವನ್ನು ಸಂಭ್ರಮದಿಂದ ಸ್ವಾಗತಿಸುವ ಮನೋಭಾವ ಬೆಳೆಸುವ ಈ ಯೋಜನೆ ರಾಜ್ಯದ ಇತರ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.



