ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪುರಸಭೆಯಲ್ಲಿ ಪ್ರಮುಖ ಹುದ್ದೆಗಳು ಹಲವು ತಿಂಗಳಿನಿಂದ ಖಾಲಿ ಇರುವುದರಿಂದ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿ, ಕಂದಾಯ ನಿರೀಕ್ಷಕ, ಕಿರಿಯ ಆರೋಗ್ಯ ನಿರೀಕ್ಷಕ ಹಾಗೂ ಎಂಜಿನಿಯರ್‌ಗಳ ಹುದ್ದೆಗಳು ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖವಾಗಿವೆ. ಆದರೆ, ತರೀಕೆರೆ ಪುರಸಭೆಯಲ್ಲಿ ಈ ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳು ಖಾಲಿ ಉಳಿದಿವೆ. ಪ್ರಸ್ತುತ ಪುರಸಭೆಯಲ್ಲಿ ಮುಖ್ಯಾಧಿ ಕಾರಿ-1, ಕಿರಿಯ ಎಂಜಿನಿಯರ್-2, ಕಂದಾಯ ನಿರೀಕ್ಷಕ-1, ಕಿರಿಯ ಆರೋಗ್ಯ ನಿರೀಕ್ಷಕರು-2, ಕರ ವಸೂಲಿಗಾರರು-2 ಹಾಗೂ ಕಚೇರಿ ವ್ಯವಸ್ಥಾಪಕ-1 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಜವಾಬ್ದಾರಿಯನ್ನು ಕೆಳ ಹಂತದ ಸಿಬ್ಬಂದಿಗೆ ಪ್ರಭಾರವಾಗಿ ನೀಡಲಾಗಿದೆ. ಎಂಜಿನಿಯರ್‌ಗಳ ಹುದ್ದೆಗಳಿಗೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ಪ್ರಭಾರವಾಗಿ ನೇಮಿಸಲಾಗಿದೆ.
ಮೂಲ ಕರ್ತವ್ಯದ ಜೊತೆಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುವುದರಿಂದ ಸಿಬ್ಬಂದಿ ಮೇಲೆ ಕಾರ್ಯಭಾರ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ಮೂಲಗಳು ತಿಳಿಸಿವೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹುಬ್ಬಳ್ಳಿ- ಚಿಕ್ಕಮಗಳೂರು ನಡುವೆ ವಿಶೇಷ ರೈಲು ಸಂಚಾರ
ಪುರಸಭೆಯ ಚುನಾಯಿತ ಸದಸ್ಯರ ಅವಧಿ ಇನ್ನೆರಡು-ಮೂರು ತಿಂಗಳಲ್ಲಿ ಅಂತ್ಯಗೊಳ್ಳಲಿದ್ದು, ಅಧಿಕಾರಿಗಳ ಕೊರತೆಯಿಂದ ವಾರ್ಡ್‌ಗಳ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಕೆಲ ಸದಸ್ಯರು ತಿಳಿಸಿದ್ದಾರೆ.




