ಇತ್ತೀಚಿನ ವರ್ಷಗಳಲ್ಲಿ ಕೀಟನಾಶಕಗಳ ಅಸುರಕ್ಷಿತ ಬಳಕೆಯಿಂದ ನಾವು ತಿನ್ನುವ ಆಹಾರ ಕಲುಷಿತವಾಗುತ್ತಿದೆ, ಹಾಗೆಯೇ ನಮ್ಮ ಪರಿಸರ ಕೂಡ ಮಾಲಿನ್ಯಗೊಳ್ಳುತ್ತಿದೆ. ಇಂದರಿಂದಾಗಿ ಮನುಷ್ಯರ ಆರೋಗ್ಯ ಕೂಡ ತೀವ್ರವಾಗಿ ಹದಗೆಡುತ್ತಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಎ. ಸಿದ್ದೀಕಿ ತಿಳಿಸಿದರು.
ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ರೇಷ್ಮೆ ಮತ್ತು ಕೃಷಿ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯಾದ, ಸಸ್ಯ ಸಂರಕ್ಷಣೆ, ಸಂಘರೋಧ ಮತ್ತು ಸಂಗ್ರಹಣಾ ನಿರ್ದೇಶನಾಲಯದಡಿಯಲ್ಲಿ ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
“ಪೀಡೆನಾಶಕಗಳ ಬಳಕೆಯ ಕುರಿತು ರೈತ ಬಾಂಧವರಿಗೆ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ. ಸಮಗ್ರ ಪೀಡೆ ನಿರ್ವಹಣೆಯ ಪ್ರಾಮುಖ್ಯತೆಯನ್ನು ತಿಳಿಸುವ ಅವಶ್ಯಕತೆ ಇದೆ” ಎಂದು ಅಭಿಪ್ರಾಯಿಸಿದರು.
ಮಿತ-ಶತ್ರು ಕೀಟಗಳು ಮತ್ತು ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಕಾರ್ಯವೈಖರಿಯ ಬಗ್ಗೆ ಸಸ್ಯ ಸಂರಕ್ಷಣಾ ಅಧಿಕಾರಿ (ಕೀಟಶಾಸ್ತ್ರ) ಡಾ. ವಿವೇಕ್ ಉಪ್ಪಾರ್ ಹಾಗೂ ಸಹಾಯಕ ಸಸ್ಯ ಸಂರಕ್ಷಣಾ ಅಧಿಕಾರಿ (ಸಸ್ಯ ರೋಗಶಾಸ್ತ್ರ) ಡಾ. ವಿನಯ್, ಜೆ. ಯು. ಸಮಗ್ರ ರೋಗ ನಿರ್ವಹಣೆಯ ಮಹತ್ವ ಮತ್ತು ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.
ಕೃಷಿ ಕೀಟಶಾಸ್ತ್ರದ ಪ್ರಾಧ್ಯಾಪಕ ಡಾ. ಮಂಜುನಾಥ .ಆರ್, ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಡಾ. ನರಸಾರೆಡ್ಡಿ, ಜಿ ಪೀಡೆನಾಶಕಗಳ ಸುರಕ್ಷಿತ ಉಪಯೋಗದ ಕುರಿತು ಉಪನ್ಯಾಸ ನೀಡಿದರು.
ಸಹಪ್ರಾಧ್ಯಾಪಕ ಡಾ. ಮಹೇಶ್, ಎಂ ಸಸ್ಯ ರೋಗ ನಿರ್ವಹಣೆಯಲ್ಲಿ ಜೈವಿಕ ರೋಗನಾಶಗಳ ಬಳಕೆ ಮತ್ತು ಇವುಗಳ ಅಭಿವೃದ್ಧಿ ಕುರಿತು ಉಪನ್ಯಾಸ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಡಾ. ಮಂಜುನಾಥ, ಆರ್., ಶಿಬಿರಾರ್ಥಿಗಳನ್ನು ಕ್ಷೇತ್ರ ಭೇಟಿಗೆ ಕರೆದೊಯ್ದು ಮಾವು ಬೆಲೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ತಿಳಿಸಿಕೊಟ್ಟರು. ಡಾ. ಆರತಿ ಪನ್ನೂರೆ ಪರಭಕ್ಷಕ ಮತ್ತು ಪರಾವಲಂಬಿ ಜೀವಿಗಳ ಅಭಿವೃದ್ಧಿ ಮತ್ತು ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು. ಮಣ್ಣಿನ ಅರೋಗ್ಯ ಮತ್ತು ಪೀಡೆನಾಶಕಗಳ ಅವಶೇಷಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹುಣಸೆಯಲ್ಲಿ ಬರುವ ಚಹಾ ಸೊಳ್ಳೆಯ ಸಮಗ್ರ ನಿರ್ವಹಣೆಯ ಬಗ್ಗೆ ಪ್ರಕಟಣೆಯನ್ನು ಬಿಡುಗಡೆಗೊಳಿಸಲಾಯಿತು. ಶಿಬಿರಾರ್ಥಿಗಳಿಗೆ ಜೈವಿಕ ರೋಗನಾಶಕಗಳಾದ, ಸುಡೋಮೋನಾಸ್ ಫ್ಲ್ಯೂರೋಸೆನ್ಸ್ ಮತ್ತು ಟ್ರೈಕೋಡರಂ ವಿರಿಡೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂತಾಮಣಿಯ ರೇಷ್ಮೆ ಮತ್ತು ಕೃಷಿ ಕಾಲೇಜಿನ ಸಸ್ಯ ಸಂರಕ್ಷಣೆ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ನಾಯ್ಕ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಎಂ. ವಿ. ಶ್ರೀನಿವಾಸರೆಡ್ಡಿ, ಉಪ-ನಿರ್ದೇಶಕರಾದ ಡಾ. ಅತಿಷಿ ಪಾಂಡೆ, ಸಸ್ಯ ಸಂರಕ್ಷಣಾ ಅಧಿಕಾರಿ ಡಾ. ವಿವೇಕ್ ಉಪ್ಪಾರ್, ಸಹಾಯಕ ಸಸ್ಯ ಸಂರಕ್ಷಣಾ ಅಧಿಕಾರಿ ಡಾ. ವಿನಯ್, ಜೆ. ಯು ಉಪಸ್ಥಿತರಿದ್ದರು.