ನಿರುದ್ಯೋಗ ಬಿಕ್ಕಟ್ಟು ಪರಿಹಾರಕ್ಕೆ ತುರ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯಿಂದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದರು.
“ಭಾರತದಲ್ಲಿ ಯುವಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಇತ್ತೀಚಿನ ವರದಿಯ ಪ್ರಕಾರ ಜೂನ್ 2024ರಲ್ಲಿ ನಮ್ಮ ದೇಶದ ನಿರುದ್ಯೋಗ ಶೇ.9.2ರಷ್ಟಾಗಿದೆ” ಎಂದರು.
“ಅನೇಕ ಯುವಜನರು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ದೇಶಾದ್ಯಂತ ಅನಿವಾರ್ಯವಾಗಿ ಅಲೆದಾಡುತ್ತಿದ್ದಾರೆ. ವಿದ್ಯಾವಂತ ಯುವಜನರಿಗೆ ಉದ್ಯೋಗಾವಕಾಶಗಳು ದೊರೆಯದೆ ತಮ್ಮ ತಾಯ್ನೆಲ, ಬಂಧು-ಬಳಗ, ಪ್ರೀತಿ-ಪಾತ್ರರನ್ನು ಬಿಟ್ಟು ದೇಶವನ್ನು ತೊರೆಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಲಸೆ ಕಾರ್ಮಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಸಮಸ್ಯೆ ಮತ್ತುಷ್ಟು ಉಲ್ಬಣಗೊಳ್ಳುತ್ತಿದೆ. ಇದಲ್ಲದೆ, ಹತ್ತಾರು ವರ್ಷಗಳ ಸತತ ಪ್ರಯತ್ನಗಳ ನಂತರವೂ ಯುಪಿಎಸ್‌ಸಿ ಮತ್ತು ರಾಜ್ಯ ಸೇವಾ ಆಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ನೀಡುವ ಸರ್ಕಾರಿ ಉದ್ಯೋಗವನ್ನು ಪಡೆಯಲಾಗದೆ ಹತಾಶರಾಗುತ್ತಿದ್ದಾರೆ. ನಿರುದ್ಯೋಗದ ಬಿಕ್ಕಟ್ಟು ಯುವಜನರ ಮಾನಸಿಕ ಆರೋಗ್ಯದ ಮೇಲೂ ಭಾರೀ ದುಷ್ಪರಿಣಾಮವನ್ನು ಉಂಟುಮಾಡುತ್ತಿದೆ” ಎಂದು ಹೇಳಿದರು.
“ಪ್ರಪಂಚದಲ್ಲೇ ಅತ್ಯಧಿಕ ಸಂಖ್ಯೆಯ ಯುವಜನರನ್ನು ಹೊಂದಿರುವ ಭಾರತ ದೇಶದಲ್ಲಿಂದು ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಖಾಯಂ ಸ್ವರೂಪದ ಕೆಲಸಗಳಿಗೂ ಗುತ್ತಿಗೆ ಆಧಾರದಲ್ಲಿ ನೇಮಕಾತಿಗಳು ನಡೆಯುತ್ತಿವೆ. ಹೊಸ ಉದ್ಯೋಗಗಳ ಸೃಷ್ಟಿಯ ಮಾತಂತೂ ದೂರವೇ ಉಳಿದಿದೆ” ಎಂದು ಅಪಾರ ಪ್ರಮಾಣದ ಉದ್ಯೋಗಾಕಾಂಕ್ಷಿ ಯುವಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿರುದ್ಯೋಗಿ ಯುವಜನರ ನೋವನ್ನು ನಿವಾರಿಸಲು ಪ್ರಧಾನ ಮಂತ್ರಿಯವರು ಕೂಡಲೇ ಕ್ರಮ ಕೈಗೊಳ್ಳಬೇಕು. ಉದ್ಯೋಗವು ಮೂಲಭೂತ ಹಕ್ಕೆಂದು ನಾವು ನಂಬುತ್ತೇವೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಗೌರವಾನ್ವಿತ ಜೀವನೋಪಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿರುದ್ಯೋಗಿ ಯುವಜನರ ಹಕ್ಕೊತ್ತಾಯಗಳನ್ನು ಬಗೆ ಹರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಒಳ್ಳೆಯ ಮನುಷ್ಯನಾಗಲು ಓದಿನ ಅಗತ್ಯವಿದೆ : ಡಾ.ಶಿವಾಜಿ ಮೇತ್ರೆ
ನೀತುಶ್ರೀ ಎಸ್ ವಿ, ಸುನಿಲ್ ಟಿ ಆರ್, ಸುಮ ಎಸ್, ಪವನ್, ವೆಂಕಟೇಶ್, ನಚ್ಚಿನ್, ಅಕ್ಷಯ್ ಸೇರಿದಂತೆ ಇತರ ಉದ್ಯೋಗ ಆಕಾಂಕ್ಷಿಗಳು ಇದ್ದರು.