ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 48ರ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ 9ಕ್ಕೂ ಹೆಚ್ಚು ಪ್ರಯಾಣಿಕರು ಬೆಂಕಿಗಾಹುತಿಯಾಗಿ ಸಜೀವ ದಹನವಾಗಿದ್ದಾರೆ. ಈ ಘಟನೆಯ ವೇಳೆ 42 ಶಾಲಾ ವಿದ್ಯಾರ್ಥಿಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ವಿವರ ತಿಳಿದುಬಂದಿದೆ.
ಈ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಹಿತಿ ನೀಡಿರುವ ಐಜಿಪಿ ರವಿಕಾಂತೇಗೌಡ, “ಸೀಬರ್ಡ್ ಬಸ್ ಹಾಗೂ ಲಾರಿಯ ನಡುವೆ ನಡೆದ ಅಪಘಾತದ ಸಂದರ್ಭದಲ್ಲಿ ಸೀಬರ್ಡ್ ಬಸ್ಗೆ ಸಮಾನಾಂತರವಾಗಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳ ಬಸ್ ಕೂಡ ಇತ್ತು. ಆದರೆ, ಆ ಬಸ್ಗೂ ಅಪಘಾತದರೂ ಕೂಡ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ತಿಳಿಸಿದ್ದಾರೆ.
“ಶಾಲಾ ಮಕ್ಕಳು ಬೆಂಗಳೂರಿನ ಟಿ ದಾಸರಹಳ್ಳಿಯಿಂದ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಒಟ್ಟು 42 ಮಕ್ಕಳು ಬಸ್ನಲ್ಲಿದ್ದರು. ಅಪಘಾತದ ವೇಳೆ ಶಾಲಾ ಮಕ್ಕಳ ಬಸ್ ಕೂಡ ಸಮಾನಾಂತರವಾಗಿ ಚಲಿಸುತ್ತಿತ್ತು. ಅಪಘಾತದ ರಭಸಕ್ಕೆ ಶಾಲಾ ಮಕ್ಕಳಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿ ದಾಟಿ ಇನ್ನೊಂದು ಬದಿಯ ರಸ್ತೆಯ ಚರಂಡಿ ಬಳಿಗೆ ಬಿದ್ದಿದೆ. ಅದೃಷ್ಟವಶಾತ್ ಶಾಲಾ ಮಕ್ಕಳಿದ್ದ ಬಸ್ನಲ್ಲಿದ್ದ ಯಾರಿಗೂ ಯಾವುದೇ ಗಾಯ ಕೂಡ ಆಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನೊಂದು ಬಸ್ನ ಮೂಲಕ ತಮ್ಮ ಪ್ರವಾಸವನ್ನು ದಾಂಡೇಲಿಗೆ ಮುಂದುವರಿಸಿದ್ದಾರೆ. ಈ ಅಪಘಾತ ಘಟನೆಗೆ ಸಂಬಂಧಿಸಿದಂತೆ ಶಾಲಾ ಬಸ್ನ ಚಾಲಕ ಪ್ರತ್ಯಕ್ಷ ಸಾಕ್ಷಿ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು” ಎಂದು ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
“ಸೀ ಬರ್ಡ್ ಬಸ್ ಹಾಗೂ ಕಂಟೇನರ್ ಲಾರಿಯ ನಡುವೆ ನಡೆದ ಅಪಘಾತ ಬಹಳ ದುರದೃಷ್ಟಕರ. ಈಗಾಗಲೇ 9 ಶವಗಳನ್ನು ಬಸ್ನಿಂದ ಹೊರತೆಗೆಯಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಬಹುತೇಕ ಎಲ್ಲರೂ ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದರು. ಹಾಗಾಗಿ, ಮೊಬೈಲ್ ನಂಬರ್ ಅನ್ನು ಪಡೆಯಲಾಗುತ್ತಿದೆ. ಮೃತಪಟ್ಟವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಆದಷ್ಟು ಶೀಘ್ರವಾಗಿ ಮುಗಿಸುತ್ತೇವೆ. ಎಲ್ಲ ರೀತಿಯ ತನಿಖೆಯನ್ನು ನಡೆಸಲಾಗುವುದು” ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.
This video cannot be played in your browser. Open the video directly





