ನಿವೃತ್ತಿಯ ನಂತರವೂ ತಮ್ಮ ಜ್ಞಾನ ಮತ್ತು ಅನುಭವವನ್ನು ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಹಂಚುತ್ತಾ ಆಡಳಿತ ತರಬೇತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಪ್ರಾಂಶುಪಾಲ ಹಾಗೂ ಸಂಪನ್ಮೂಲ ವ್ಯಕ್ತಿ ವಿ. ಮಲ್ಲೇಶಪ್ಪ ಅವರನ್ನು ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನ ಹೆಣ್ಣೂರು-ಬಾಣಸವಾಡಿಯ ಕಾಸ್ಮೋಪಾಲಿಟನ್ ಕ್ಲಬ್ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಲ್ಲೇಶಪ್ಪ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, 76 ವರ್ಷ ವಯಸ್ಸಿನಲ್ಲಿಯೂ ವಿ. ಮಲ್ಲೇಶಪ್ಪ ಅವರು ಆಡಳಿತ ತರಬೇತಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಬೆಂಗಳೂರಿನ ಸಚಿವಾಲಯ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಆಡಳಿತಾತ್ಮಕ, ಸೇವಾ ಹಾಗೂ ಆರ್ಥಿಕ ನಿಯಮಗಳ ಕುರಿತು ಉಪನ್ಯಾಸ ನೀಡುತ್ತಿದ್ದಾರೆ. ತಮ್ಮ ದೀರ್ಘಕಾಲದ ಅನುಭವವನ್ನು ಮುಂದಿನ ಪೀಳಿಗೆಯ ಅಧಿಕಾರಿಗಳು ಮತ್ತು ನೌಕರರಿಗೆ ಹಂಚುವ ಮೂಲಕ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸಲು ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂ ದಾಖಲೆಗಳ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಕಂಪಳ ಗೆಳೆಯರ ಬಳಗದ ಅಧ್ಯಕ್ಷ ವಿ. ಅಜ್ಜಪ್ಪ ಮಾತನಾಡಿ, ವಿ. ಮಲ್ಲೇಶಪ್ಪ ಅವರ ಕರ್ತವ್ಯನಿಷ್ಠೆ, ಸೇವಾ ಮನೋಭಾವ ಮತ್ತು ಸರಳತೆಯನ್ನು ಶ್ಲಾಘಿಸಿದರು.
ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಬಳಗದ ಗೌರವಾಧ್ಯಕ್ಷ ರೇವಣ್ಣ ಸಿದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗದ ಸ್ಥಾಪನೆ ಮತ್ತು ಉದ್ದೇಶಗಳನ್ನು ವಿವರಿಸಿ, ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ನಿವೃತ್ತ ಪ್ರಾಂಶುಪಾಲ ಬಸವರಾಜು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ರಾಮಣ್ಣ, ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಚಂದ್ರಪ್ಪ, ಗೃಹರಕ್ಷಕ ದಳದ ಆಡಳಿತಾಧಿಕಾರಿ ಆರ್.ಪಿ. ಜಯಣ್ಣ ಹಾಗೂ ನಿವೃತ್ತ ಅಧೀಕ್ಷಕ ನಿರಂಜನ್ ಉಪಸ್ಥಿತರಿದ್ದರು.
ತಿಪಟೂರಿನ ನಿವೃತ್ತ ಪ್ರಾಂಶುಪಾಲ ಬಸವರಾಜು ವಂದಿಸಿದರು.




