ಮಾನ್ಸೂನ್‌ನ ಜೂಜಾಟಕ್ಕೆ ಎಲ್ ನಿನೋ ಪರಿಣಾಮವೂ ಸೇರಿ ರಾಜ್ಯಾದ್ಯಂತ ಬರ ಆವರಿಸಿದೆ. ಮೊದಲ ಹಂತದಲ್ಲಿ ಬರ ಘೋಷಣೆಯಾದ ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕುಗಳ ಹಳ್ಳಿಗಳಿಗೆ ಭಾನುವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, ರೈತರ ಅಸಹಾಯಕತೆಯನ್ನು ಕಣ್ಣಾರೆ ಕಂಡು ಮರುಗಿತು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದ ತಂಡದಲ್ಲಿ ಉಪನಿರ್ದೇಶಕ ಚೇತ್ ರಾಮ್ ಮೀನಾ, ನೀತಿ ಆಯೋಗದ ಓಎಸ್‌ಡಿ ಕರ್ನಲ್ ಅಮರೇಂದ್ರ ಸಿಂಗ್ ಮತ್ತು ಜಲಸಂಪನ್ಮೂಲ ಹಾಗೂ ನದಿ ಪುನಶ್ಚೇತನ ನಿರ್ದೇಶಕ ಡಾ. ಜೆ. ಹರ್ಷ ಇದ್ದರು. ತಂಡ ಮೊದಲಿಗೆ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಸಕ್ಕರ ಗ್ರಾಮಕ್ಕೆ ತೆರಳಿತು.

ತಿರುಮಲಪ್ಪ ಅವರು 2.5 ಎಕರೆಯಲ್ಲಿ 1 ಕ್ವಿಂಟಾಲ್ ಶೇಂಗಾ ಬಿತ್ತಿ, ಬಿತ್ತನೆ ಮತ್ತು ರಸಗೊಬ್ಬರಕ್ಕೆ ₹86,893 ವ್ಯಯಿಸಿದ್ದರು. ಮಳೆಯಿಲ್ಲದೆ ಬೆಳೆ ಸಂಪೂರ್ಣ ಒಣಗಿದ್ದು, ಈಗಾಗಲೇ ಸುಮಾರು ₹1 ಲಕ್ಷ ನಷ್ಟವಾಗಿದೆ. ತಲೆ ಮೇಲೆ ಕೈ ಹೊತ್ತು ಕುಳಿತ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ನೆರವಿಗೆ ಬರಬೇಕೆಂದು ತಂಡದ ಎದುರು ಮನವಿ ಮಾಡಿದರು.
ಪಕ್ಕದ ಮುಕುಂದಪ್ಪ ಅವರ ಜಮೀನಿನಲ್ಲಿ ಅಂತರ್ಜಲ ಕುಸಿದು ನೀರಾವರಿ ಆಶ್ರಿತ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಮತ್ತೊಂದೆಡೆ, ರೈತ ನಾಗರಾಜ ಅವರು ನಾಶವಾದ ಶೇಂಗಾ ಬೆಳೆಯನ್ನು ಕತ್ತರಿಸಿ, ಜಾನುವಾರುಗಳ ಮೇವಿಗಾಗಿ ಮನೆ ಮುಂದೆ ರಾಶಿ ಹಾಕಿದ್ದರು. “ಬೆಳೆ ಕೈಗೆ ಸಿಗುವ ಸಂಭವವೇ ಇಲ್ಲ” ಎಂಬ ಅವರ ಮಾತು ಬರದ ತೀವ್ರತೆಗೆ ಕನ್ನಡಿ ಹಿಡಿಯಿತು.

10 ಎಕರೆಯಲ್ಲಿ ತೊಗರಿ ಬಿತ್ತಿದ ನಿವೃತ್ತ ಪ್ರಾಂಶುಪಾಲ ಹಾಗೂ ಕೃಷಿಕ ತಿಪ್ಪಯ್ಯ ಅವರ ಹೊಲದಲ್ಲಿ ಕೊರೆಸಿದ ಬೋರ್‌ವೆಲ್‌ಗಳಲ್ಲಿ ನೀರು ಸಿಕ್ಕಿಲ್ಲ. ಮಳೆ ನಂಬಿ ₹62,025 ಖರ್ಚು ಮಾಡಿದ್ದು, ಗಿಡಗಳು ಟಿಸಿಲೊಡೆಯದೆ ಬೆಳವಣಿಗೆ ಕುಂಠಿತವಾಗಿದೆ. “ಒಂದು ಕಾಳು ತೊಗರಿಯೂ ಸಿಗುವುದಿಲ್ಲ, ₹3 ಲಕ್ಷಕ್ಕೂ ಹೆಚ್ಚು ನಷ್ಟವಾಗಲಿದೆ. ಧರ್ಮಪುರ ಹೋಬಳಿಯಲ್ಲಿ ಮಳೆ ನಂಬಿ ಬಿತ್ತಿದ ಎಲ್ಲ ರೈತರ ಸ್ಥಿತಿಯೂ ಇದೇ” ಎಂದು ಅವರು ತಂಡಕ್ಕೆ ವಿವರಿಸಿದರು.
ಸ್ಥಳೀಯ ರೈತ ಮುಖಂಡ ಎಸ್.ಎನ್. ಗಿರಿ ಅವರು, ಬೋರ್‌ವೆಲ್ ಇರುವವರು ತೋಟ ಮಾಡಿದ್ದರೂ ಅಂತರ್ಜಲ ಕುಸಿಯುತ್ತಿದೆ; ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳನ್ನು ತುಂಬಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ನಂತರ ಹೊಸಕೆರೆ ಗ್ರಾಮಕ್ಕೆ ತೆರಳಿದ ತಂಡ, ವಿಬಿ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು. ಜಲ ಜೀವನ್ ಮಿಷನ್‌ನಡಿ ಮನೆಗಳಿಗೆ ಕಲ್ಪಿಸಿರುವ ನಳ ಸಂಪರ್ಕದ ಕಾರ್ಯಕ್ಷಮತೆಯನ್ನೂ ಪರೀಕ್ಷಿಸಿತು. ತೊಗರಿ, ಹುರುಳಿ ಮತ್ತು ಮಿಡಿ ಸೌತೆ ಬೆಳೆಗಳ ನಷ್ಟವನ್ನು ಹೊಲಗಳಲ್ಲಿ ವೀಕ್ಷಿಸಿತು.

ಪರಿಹಾರಕ್ಕೆ ರೈತರ ಒಕ್ಕೊರಲ ಆಗ್ರಹ
ಪರಶುರಾಮಪುರ ಹೋಬಳಿಯ ರೈತ ಭವನದಲ್ಲಿ ನಡೆದ ಸಂವಾದದಲ್ಲಿ ರೈತ ಮುಖಂಡ ಚಿಕ್ಕಣ್ಣ, ಬಿತ್ತನೆಗೆ ಎಕರೆಗೆ ₹30,000–₹50,000 ವೆಚ್ಚವಾಗಿದ್ದು ರೈತರು ತೀವ್ರ ನಷ್ಟದಲ್ಲಿದ್ದಾರೆ ಎಂದರು. ಹೆಕ್ಟೇರ್‌ಗೆ ₹40,000 ಅಥವಾ ಎಕರೆಗೆ ಕನಿಷ್ಠ ₹20,000 ಪರಿಹಾರ ನೀಡಬೇಕೆಂದು ರೈತ ನಾಯಕರು ಒತ್ತಾಯಿಸಿದರು.
2019ರಿಂದ ಪಿಎಂ ಕಿಸಾನ್ ಸಮ್ಮಾನ್ ನೆರವು ಸಿಗದ ವಿಭಜಿತ ರೈತ ಕುಟುಂಬಗಳಿಗೆ ತಾಂತ್ರಿಕ ಅಡಚಣೆ ನಿವಾರಿಸಿ ಲಾಭ ಕಲ್ಪಿಸುವುದು
-ಖಾಸಗಿ ಬ್ಯಾಂಕ್‌ಗಳ ಏಕಸ್ವಾಮ್ಯ ಕೊನೆಗೊಳಿಸಲು ಕೆನರಾ ಬ್ಯಾಂಕ್, ಎಸ್‌ಬಿಐನಂತಹ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳನ್ನು ತೆರೆಯುವುದು
ತಂಡ ರೈತರ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ಉತ್ತಮ ತೀರ್ಮಾನದ ಭರವಸೆ ನೀಡಿತು.
ದೊಡ್ಡೇರಿ ಗ್ರಾಮದಲ್ಲಿ ರೈತ ಮುಖಂಡ ಭೂತಯ್ಯ ನೇತೃತ್ವದ ನಿಯೋಗ, ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಪೀಡಿತ ಎಂದು ಘೋಷಿಸಬೇಕು, ಬರ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಗೋಶಾಲೆ ಮತ್ತು ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿತು. ಬಳಿಕ ತಂಡ ಕುರುಡಿಹಳ್ಳಿಯ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿತು.
ಜಿಲ್ಲಾಧಿಕಾರಿ ಎಸ್. ರಮ್ಯಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ಎಸ್. ಆಕಾಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




