ನಗರದ ಗಂಗೋತ್ರಿ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ಒಳಚರಂಡಿ ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬಡಾವಣೆಯ ನಿವಾಸಿಗಳ ನಿಯೋಗವು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ (ಹೆಚ್ಚುವರಿ ಆಯುಕ್ತರ ಮೂಲಕ) ಮನವಿ ಸಲ್ಲಿಸಿತು.
ಬಡಾವಣೆಯ ಕೆಲ ಕ್ರಾಸ್‌ಗಳಲ್ಲಿ ಮೇ 31ರಿಂದ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಣಗೊಂಡು ಸರಬರಾಜಾಗಿದ್ದು, ದುರ್ವಾಸನೆಯುಕ್ತ ನೀರು ಮನೆಗಳ ಸಂಪು ಹಾಗೂ ಟ್ಯಾಂಕ್‌ಗಳಿಗೆ ಸೇರಿದೆ. ಇದನ್ನು ತಿಳಿಯದೆ ಬಳಸಿದ ಹಲವಾರು ನಿವಾಸಿಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಅನೇಕರಿಗೆ ವಾಂತಿ, ಬೇಧಿ ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಮಸ್ಯೆ ಕುರಿತು ದೂರು ನೀಡಿದ ಬಳಿಕ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೂನ್ 8ರಿಂದ ತಾತ್ಕಾಲಿಕವಾಗಿ ಸಮಸ್ಯೆ ನಿಯಂತ್ರಣಕ್ಕೆ ಬಂದಿರುವಂತೆ ಕಂಡುಬಂದಿದೆ. ಆದರೆ ನಿವಾಸಿಗಳು ತಮ್ಮ ಖರ್ಚಿನಲ್ಲೇ ಸಂಪು ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದ್ದಾರೆ.
ಪ್ರಸ್ತುತ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಕುಡಿಯುವ ನೀರಿನ ಪೈಪ್‌ಗಳಿಗೆ ಕೊಳಚೆ ನೀರು ಯಾವ ಭಾಗದಲ್ಲಿ ಸೇರುತ್ತಿದೆ ಎಂಬುದನ್ನು ಪತ್ತೆಹಚ್ಚದೇ ಹೋದರೆ ಮುಂದೆಯೂ ಇದೇ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ನೀರು ಸರಬರಾಜು ಹಾಗೂ ಒಳಚರಂಡಿ ಜಾಲದ ತಾಂತ್ರಿಕ ಪರಿಶೀಲನೆಯನ್ನು ಪರಿಣತ ಇಂಜಿನಿಯರ್‌ಗಳ ಮೂಲಕ ನಡೆಸಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಮೂರು ತಿಂಗಳಿನಿಂದ ಆಹಾರ ಕಿಟ್ ಇಲ್ಲ: ಆದಿವಾಸಿಗಳ ಆಕ್ರೋಶ
ನಿಯೋಗದಲ್ಲಿ ಸೀಮಾ, ಆಸಿಯಾ ಬೇಗಂ, ರಘುಪತಿ, ಸುಮಾ, ಸುಭಾಷ್, ನಾಗರಾಜ್ ಸೇರಿದಂತೆ ಬಡಾವಣೆಯ ಹಲವಾರು ನಿವಾಸಿಗಳು ಭಾಗವಹಿಸಿದ್ದರು. ಮನವಿಯೊಂದಿಗೆ ಬಡಾವಣೆಯ ಜನರಿಂದ ಸಂಗ್ರಹಿಸಲಾದ ಸಹಿಗಳನ್ನೂ ಸಲ್ಲಿಸಲಾಯಿತು.




