• ಹಸುಗಳನ್ನು ರಕ್ಷಿಸಲು ಹೋದ ವೃದ್ಧ ರೈತನಿಗೆ ಗಾಯ, ಆಸ್ಪತ್ರೆಗೆ ದಾಖಲು
• ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಕೊಟ್ಟಿಗೆಯಿಂದ ಹೊರಗೆ ಕಳಿಸಿದ್ದ ರೈತ
ಆಕಶ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ಸಜೀವವಾಗಿ ಸುಟ್ಟು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಾಘಟ್ಟ ಗ್ರಾಮದಲ್ಲಿ ನಡೆದಿದೆ.
ಹೊನ್ನಘಟ್ಟ ಗ್ರಾಮದ ಮುನಿಹನುಮಯ್ಯ ಎಂಬ ರೈತನಿಗೆ ಸೇರಿದ್ದ ಹಸುಗಳು ಸುಟ್ಟುಹೋಗಿವೆ. ಮುನಿಹನುಮಯ್ಯ ತಮ್ಮ ತೋಟದ ಮನೆ ಬಳಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು, ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದರು. ಘಟನೆ ನಡೆದ ದಿನ ರಾತ್ರಿ ಎಂದಿನಂತೆ ಹಸುಗಳಿಗೆ ಮೇವು ಹಾಕಿ ಮನೆಯಲ್ಲಿದ್ದರು. ಈ ವೇಳೆ ಏಕಾಏಕಿ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿತ್ತು.
ಮುನಿಹನುಮಯ್ಯ ಕೂಡಲೆ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕೊಟ್ಟಿಗೆಗೆ ಒಣಗಿದ ತೆಂಗಿನ ಗರಿಗಳನ್ನು ಹಾಕಿದ್ದ ಕಾರಣ ಆ ವೇಳೆಗಾಗಲೇ ಸಂಪೂರ್ಣ ಕೊಟ್ಟಿಗೆಗೆ ಬೆಂಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಲಕ್ಷ ಬೆಲೆ ಬಾಳುವ ಎರಡು ಹಸುಗಳು ಬೆಂದು ಸ್ಥಳದಲ್ಲೆ ಮೃತಪಟ್ಟಿವೆ.
ದನದ ಕೊಟ್ಟಿಗೆಗೆ ಬೆಂಕಿ ಬೀಳುತ್ತಿದ್ದಂತೆ ಮನೆಯಲ್ಲಿದ್ದ ವೃದ್ದ ಮುನಿಹನುಮಯ್ಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ನಾಲ್ಕು ಜಾನುವಾರುಗಳನ್ನ ರಕ್ಷಿಸಿ ಹೊರಗಡೆ ಕಳಿಸಿದ್ದಾರೆ. ಉಳಿದ ಎರಡು ಹಸುಗಳನ್ನು ರಕ್ಷಿಸಲು ಹೋದ ವೇಳೆ ರೈತ ಸಹ ಬೆಂಕಿಗೆ ಸಿಲುಕಿ ಶೇ. 50 ರಷ್ಟು ಸುಟ್ಟಿದ್ದು, ಸ್ಥಳಿಯರು ರೈತನನ್ನು ರಕ್ಷಿಸಿ ಆಸ್ವತ್ರೆಗೆ ಸಾಗಿಸಿದ್ದಾರೆ.