ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ, ‘ಬರ ಪರಿಸ್ಥಿತಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ. ಆದರೆ ಬರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸದಿದ್ದರೆ ಅಧಿವೇಶನ ಅರ್ಥಹೀನವಾಗಲಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ 140 ವರ್ಷಗಳ ನಂತರ ಭೀಕರ ಬರ ಉಂಟಾಗಿದೆ ಎಂದು ಸರ್ಕಾರವೇ ಹೇಳುತ್ತಿದೆ. ಕೆರೆ-ಕಟ್ಟೆಗಳು ಹಾಗೂ ಜಲಮೂಲಗಳು ಬತ್ತಿದ್ದು, ರೈತರ ಬೆಳೆಗಳು ಸಂಪೂರ್ಣ ನಷ್ಟವಾಗಿವೆ. ಅಂತರ್ಜಲ ಕುಸಿತದಿಂದ ತೋಟಗಾರಿಕೆ ಬೆಳೆಗಳು ಒಣಗಿದ್ದು, ನೀರು ಮತ್ತು ಮೇವು ಕೊರತೆಯಿಂದ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಉದ್ಯೋಗ ಅರಸಿ ಜನರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.
‘ಸರ್ಕಾರ ಹಳೆಯ ಮಾನದಂಡಗಳ ನೆಪ ಹೇಳದೆ ತನ್ನ ಸಂಪನ್ಮೂಲಗಳ ಮೂಲಕ ತುರ್ತು ಬರ ಪರಿಹಾರ ಕ್ರಮ ಕೈಗೊಳ್ಳಬೇಕು. ಪ್ರತಿ ಎಕರೆಗೆ ₹25 ಸಾವಿರ ಪರಿಹಾರ, ಕೃಷಿ ಸಾಲ ಮನ್ನಾ, ಸಾಲ ವಸೂಲಿಗೆ ತಡೆ, ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆ ವಿದ್ಯುತ್, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವುದು ಹಾಗೂ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
‘ಅಲ್ಲದೆ ಸಂಪೂರ್ಣ ಬೆಳೆ ವಿಮೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಹೆಚ್ಚುವರಿ ಪಡಿತರ ಒದಗಿಸಬೇಕು. ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಭತ್ತ, ಜೋಳ ಮತ್ತು ರಾಗಿಯ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. ಗ್ರಾಮಗಳ ಸಮೀಪವೇ ಉದ್ಯೋಗ ಕಲ್ಪಿಸಿ, ಭವಿಷ್ಯದಲ್ಲಿ ಬರ ಮರುಕಳಿಸದಂತೆ ದೂರದೃಷ್ಟಿಯ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ–ಶಹಾಪುರ ಬೈಪಾಸ್ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಉಮಾಪತಿ ಪಾಟೀಲ, ಕಾರ್ಯದರ್ಶಿ ರಮೇಶ ರಾಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಭಜಂತ್ರಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





