ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಜೆರೋಸಾ ಶಾಲೆಯಲ್ಲಿ ನಡೆದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಗುಲ್ಬರ್ಗದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಐಎಎಸ್ ಅಧಿಕಾರಿ ಡಾ.ಆಕಾಶ್ ಎಸ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.
ಮಂಗಳೂರು ನಗರಲ್ಲಿ ಈ ದಿನ.ಕಾಮ್ ಜೊತೆ ಮಾತನಾಡಿದ ಸಚಿವರು, “ಶಾಲೆಯಲ್ಲಿ ನಡೆದಿರುವ ಪಠ್ಯ ಪ್ರವಚನದ ಬಗ್ಗೆಯೂ ಕೂಡ ತನಿಖೆಯಾಗಲಿದೆ. ಪೋಷಕರ ದೂರಿನ ಬಗ್ಗೆಯೂ ತನಿಖೆಯಾಗಲಿದೆ” ಎಂದು ಸಚಿವರು ತಿಳಿಸಿದರು.
“ಶಾಲೆಯೊಳಗೆ ಇತ್ಯರ್ಥಪಡಿಸಬಹುದಾಗಿದ್ದ ವಿಚಾರವನ್ನು ಶಾಸಕರಿಬ್ಬರು ಸೇರಿಕೊಂಡು ಆಶಾಂತಿಯ ಹಾಗೂ ಭಯ ಹುಟ್ಟಿಸುವ ರೀತಿಯಲ್ಲಿ ಪರಿವರ್ತನೆ ಮಾಡಿದ್ದು ನಿಜಕ್ಕೂ ವಿಷಾದನೀಯ. ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ” ಎಂದು ಸಚಿವ ಗುಂಡುರಾವ್ ಅವರು ಹೇಳಿದರು.
“ಪ್ರಕರಣದ ಒಟ್ಟಾರೆ ಸಂಚು ಯಾವ ರೀತಿ ನಡೆದಿತ್ತು, ಯಾರು ಸಂಚು ರೂಪಿಸಿದರು, ಶಾಸಕರು ಯಾವ ರೀತಿಯಲ್ಲಿ ಪ್ರಚೋದನೆ ಮಾಡಿದರು ಎನ್ನುವ ಬಗ್ಗೆ ಕೂಡ ತನಿಖೆ ನಡೆಯಲಿದೆ” ಎಂದು ಸಚಿವ ಗುಂಡುರಾವ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಿಪಿಐಎಂಎಲ್ ರೆಡ್ ಸ್ಟಾರ್
ಶಾಸಕ ವೇದವ್ಯಾಸ ಕಾಮತ್ ಶಾಲೆಯ ಬಳಿಗೆ ಬಂದು ಇನ್ನೋರ್ವ ಶಾಸಕ ಭರತ್ ಶೆಟ್ಟಿ ಶಿಕ್ಷಣಾಧಿಕಾರಿ ಕಚೇರಿ ಬಳಿ ಜನ ಸೇರಿಸಿ ಕೋಮು ಪ್ರಚೋದನೆ ಮಾಡಿರುವುದು ದಾಖಲೆ ಸಹಿತ ಸಾಬೀತಾಗಿದೆ. ಇದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಇದೀಗ ತಮ್ಮ ಮೇಲಿನ ಎಫ್‌ಐಆರ್ ಹಿಂಪಡೆಯುವಂತೆ ಈ ಶಾಸಕರಿಬ್ಬರು ಒತ್ತಾಯಿಸುತ್ತಿದ್ದಾರೆ. ಆದರೆ ಅವರು ಆಗ್ರಹಿಸಿದ ಎಫ್‌ಐಆರ್ ಹಿಂಪಡೆಯಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಯಲಿದೆ, ಕಾನೂನಿನ ಪ್ರಕಾರವೇ ಕ್ರಮ ಜರುಗಿಸಲಾಗುವುದು” ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.