ಕೇಂದ್ರದ ಬಿಜೆಪಿ ಸರ್ಕಾರದ ರೈತ, ಕೃಷಿ, ಕಾರ್ಮಿಕ ಮತ್ತು ಕೈಗಾರಿಕಾ ಕಾರ್ಮಿಕರ ವಿರೋಧಿ ನೀತಿಯನ್ನು ಖಂಡಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಸಂಯುಕ್ತ ಹೋರಾಟ ಸಮಿತಿಯಿಂದ ಕೇಂದ್ರಕ್ಕೆ ಮನವಿ ಮಾಡಿದ್ದು, “ಬಿಜೆಪಿ ತಮ್ಮ ಅಧಿಕಾರದ ಹತ್ತು ವರ್ಷಗಳಿಂದ ಈ ದೇಶದ ಅನ್ನದಾತ ರೈತರಿಗೆ ಈ ದೇಶದ ಸಂಪತ್ತನ್ನು ಸೃಷ್ಟಿ ಮಾಡುತ್ತಿರುವ ಕಾರ್ಮಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಈ ದೇಶದ ಜನರ ಭಾವನಾತ್ಮಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೋಮುವಾದದ ವಿಷಬೀಜ ಬಿತ್ತಿ ಜನರ ಐಕ್ಯತೆಯನ್ನು ಮುರಿದು ಕಾರ್ಪೊರೇಟ್ ಕೃಷಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಭಾರತ ದೇಶದ ಸಂಪತ್ತನ್ನು ಲೂಟಿ ಮಾಡಲು ಅನುಕೂಲವಾಗುವಂತ ನೀತಿಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಹೊರಟಿದ್ದೀರಿ” ಎಂದರು.
“ಸಂಯುಕ್ತ ಕಿಸಾನ್ ಮೋರ್ಚಾ ದೆಹಲಿಯಲ್ಲಿ 13 ತಿಂಗಳು ಶಾಂತಿಯಿಂದ ನಡೆಸಿದ ಐತಿಹಾಸಿಕ ಹೋರಾಟದ ಫಲವಾಗಿ ತಮ್ಮ ಸರ್ಕಾರ ರೈತರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದೆ ಪಡೆದಿದ್ದು, ಮೂರು ವರ್ಷ ಗತಿಸಿದರೂ ತಾವು ಸ್ಪಂದಿಸಲೇ ಇಲ್ಲ. ಈ ವರ್ಷದ ತಮ್ಮ ಸರ್ಕಾರ ಮಂಡಿಸಿದ ಮುಂಗಡ ಪತ್ರದಲ್ಲಿ ಅನ್ನದಾತರ ಕಾರ್ಮಿಕರ ಬೇಡಿಕೆಗಳ ಬಗ್ಗೆ ಯಾವುದೇ ಪ್ರಸ್ತಾಪಗಳು ಇಲ್ಲ. ಆದರೆ ಈ ದೇಶದ ಕೃಷಿ ಕೈಗಾರಿಕೆಗಳನ್ನು ಕಾರ್ಪೊರೇಟ್ ಕಂಪನಿಗಳ ಕೈಗೆ ಹಸ್ತಾಂತರ ಮಾಡುವ ಎಲ್ಲ ವಿಷಯಗಳನ್ನೂ ಮುಂಡಿಸಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಸರ್ಕಾರದ ರೈತ ಕಾರ್ಮಿಕ ವಿರೋಧಿ ಧೋರಣೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ 2024 ಫೆಬ್ರವರಿ 13ರಿಂದ ಪಾರ್ಲಿಮೆಂಟ್ ಚಲೋಗೆ ಕರೆ ಕೊಟ್ಟಿದ್ದು, ದೆಹಲಿ ಒಳಗೆ ರೈತರು ಪ್ರವೇಶಿಸಿದಂತೆ ತಮ್ಮ ಸರ್ಕಾರ ತಡೆಗೋಡೆಗಳನ್ನು ನಿರ್ಮಿಸಿದೆ” ಎಂದು ಹೇಳಿದರು.
“ಶಾಂತಿಯುತ ಪ್ರತಿಭಟನಾ ಕಾರ್ಯದ ಮೇಲೆ ಪ್ಯಾರಾಮೀಟರ್ ಮತ್ತು ಪೊಲೀಸ್ ಪಡೆಗಳ ಬಳಕೆ ಮಾಡುವುದರ ಮೂಲಕ ಆಶೀರ್ವಾದ ಜಲ್ ಫಿರಂಗಿ ಡ್ರೋಣ್ ಮೂಲಕ ಶಲಾಬಾಹುಗಳನ್ನು ಪ್ರಯೋಗಿಸಿ ಮತ್ತು ರಬ್ಬರ್ ಬುಲೆಟ್‌ಗಳನ್ನು ರೈತರ ಮೇಲೆ ಪ್ರಯೋಗಿಸಿ ಪ್ರಜಾಸತ್ತಾತ್ಮಕ ಚಳವಳಿಯನ್ನು ಹತ್ತಿಕ್ಕಲು ಹೊರಟಿರುವಿರಿ. ಭಾರತ ದೇಶದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಮಾಡಲು ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಭಾರತ ದೇಶದ ಸಂವಿಧಾನದಲ್ಲಿ ಹಕ್ಕನ್ನು ನೀಡಿದೆ. ಸಂವಿಧಾನ ವಿರೋಧಿ ಸರ್ಕಾರ ಪ್ರಜಾಸತ್ತಾತ್ಮಕ ಹಕ್ಕಿನ ಮೇಲೆ ದಾಳಿ ನಡೆಸಿರುವುದು ಖಂಡನೀಯ” ಎಂದರು.
“ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸಿ ಧರ್ಮ ನಿರಪೇಕ್ಷ(ಜಾತ್ಯತೀತ) ಪ್ರಜಾಪ್ರಭುತ್ವ ಗಣತಂತ್ರದ ಸಂವಿಧಾನ ರಕ್ಷಣೆ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲ ಸಾರ್ವಜನಿಕ ಕ್ಷೇತ್ರಗಳ ಮತ್ತು ಎನ್‌ಎಂಪಿ ಒಳಗೊಂಡಂತೆ ಎಲ್ಲ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು” ಎಂದು ಆಗ್ರಹಿಸಿದರು.
“ಡಾ ಸ್ವಾಮಿನಾಥನ್ ಶಿಫಾರಸಿನಂತೆ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ರಚಿಸಬೇಕು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು. ಮನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ, ₹600 ಕೂಲಿ ನಿಗದಿ ಮಾಡಿ ಬಯೋಮೆಟ್ರಿಕ್ ಪದ್ಧತಿ ಕೈಬಿಡಬೇಕು. ನ್ಯಾಯಯುತ ಜಿಎಸ್‌ಟಿ ಪಾಲನ್ನು ರಾಜ್ಯಗಳಿಗೆ ಕೊಡುವ ಮುಖಾಂತರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು. ಆಕುಶಲ ಕಾರ್ಮಿಕರಿಗೆ ₹31,000 ಕನಿಷ್ಟ ವೇತನ ಹಾಗೂ ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ.15ರಷ್ಟು ಹೆಚ್ಚಳದೊಂದಿಗೆ ನಿಗದಿಪಡಿಸಬೇಕು” ಎಂದರು.
“ಗ್ರಾಹಕ ಬೆಲೆ ಸೂಚ್ಯಂಕದ ಪ್ರತಿ ಅಂಶದ ಹೆಚ್ಚಳಕ್ಕೆ ಪ್ರತಿದಿನಕ್ಕೆ ಆರು ಪೈಸೆಗಳ ತುಟ್ಟಿಭತ್ಯೆ ನಿಗದಿಪಡಿಸಬೇಕು. ಬೆಲೆ ಸೂಚ್ಯಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ನಮ್ಮ ಸಂವಿಧಾನದ ಪರಿಚ್ಛೇದ 39(ಡಿ)ನಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು. ಕಡಿಮೆ ವೇತನ ನೀಡುತ್ತಾ ಗುತ್ತಿಗೆ ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು. ಕೇಂದ್ರ ರಾಜ್ಯ ಸರ್ಕಾರಗಳು ವಿವಿಧ ಇಲಾಖೆಗಳು ನಿಗಮ ಮಂಡಳಿ ಆಸ್ಪತ್ರೆ, ನಗರಸಭೆ ಖಾಸಗಿ ಕಂಪನಿಗಳಲ್ಲಿ ಗುತ್ತಿಗೆ ಆಧಾರಿತವಾಗಿ ವರ್ಷಗಟ್ಟಲೆ ದುಡಿಸಿಕೊಳ್ಳುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಮಾತಿಗೆ ಶಾಸನ ತರಬೇಕು. ದೇಶದಲ್ಲಿರುವ ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಭಾಗವಾಗಿ ಕನಿಷ್ಟ ಮಾಸಿಕ ಪಿಂಚಣಿ ₹6,000 ಪಿಎಫ್, ಪಿಂಚಣಿ ₹10,000ಕ್ಕೆ ಹೆಚ್ಚಿಸಬೇಕು. ಎಲ್ಲ ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆಗೆ ಜಿಡಿಪಿ ಶೇ.6ರಷ್ಟು ಮೀಸಲಿರಿಸಬೇಕು” ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು-1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು-1996ಗಳನ್ನು ಪುನರ್ ಸ್ಥಾಪಿಸಬೇಕು.
ಆಹಾರ, ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕ ಆಹಾರಕ್ಕಾಗಿ ಇರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‌ಎಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ, ಮನರೇಗಾದಂತಹ ಮುಂತಾದ ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು.
3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು. ಎನ್‌ಇಪಿ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾಮಾಂತರ | ಕಾಯಕಯೋಗಿ ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆಯೋಣ: ಸಚಿವ ಮುನಿಯಪ್ಪ
“49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು 20 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ ₹31,000 ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ ₹10,000 ಪಿಂಚಣಿ ಕೊಡಬೇಕು. ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು. ಬರಪೀಡಿತ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು” ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷರು ಸಂಗಮ ಗುಳೇಗೌಡ್ರ, ಸಂಚಾಲಕ ಬಸವರಾಜ್ ಮೇಳಿ, ಸಿಐಟಿಯು ಅಧ್ಯಕ್ಷೆ ಕಲಾವತಿ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಸೇರಿದಂತೆ ಬಹುತೇಕರು ಇದ್ದರು.