ಬೆಂಗ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಐಒ ಕಾರ್ಯಕರ್ತರು ಬೆಂಗ್ರೆಯ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯ ಸುತ್ತಮುತ್ತಲಿನ ಜನರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಹಕ್ಕಿನ ಲಭಿಸುವಿಕೆಗೆ ಎಸ್‌ಐಒ ಸಂಘಟನೆಯೊಂದಿಗೆ ಜೊತೆಗೂಡಿದರು.
ಜಿಲ್ಲಾಧ್ಯಕ್ಷ ಆಸಿಫ್ ಮಾತನಾಡಿ, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಮನವಿ ಪತ್ರ ಸಲ್ಲಿಸಿದರೂ ಈವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಸರ್ಕಾರವು ನೀಡುವ ಸವಲತ್ತು ಅದು ಔದಾರ್ಯವಲ್ಲ. ಬದಲಾಗಿ ಮಕ್ಕಳ ಹಕ್ಕು ಮತ್ತು ಅದನ್ನು ಖಾತರಿಪಡಿಸುವುದು ಸರ್ಕಾರದ ಹೊಣೆಗಾರಿಕೆ. ಈ ಶಾಲೆಯಲ್ಲಿ ಮಧ್ಯಮ ವರ್ಗದ ಬಡ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಅವರಿಗೂ ಸಹ ಶಿಕ್ಷಣ ಹಕ್ಕು ಕಾಯ್ದೆ ಒದಗಿಸುವ ಗುಣಮಟ್ಟ ಶಿಕ್ಷಣವನ್ನು ದೊರಕಿಸಬೇಕು” ಎಂದು ಆಗ್ರಹಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾಧ್ಯಕ್ಷ ಗಪೂರ್ ಖುಲಾಯಿ ಮಾತನಾಡಿ, “ಸರ್ಕಾರಿ ಶಾಲೆಯ ಸಮರ್ಪಕ ವ್ಯವಸ್ಥೆಗಾಗಿ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸುವುದು ಖೇದಕರ ಸಂಗತಿ. ಇಲಾಖೆಯೇ ಖುದ್ದಾಗಿ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಬದಲಾಗಿ ಸುಮ್ಮನೆ ಕುಳಿತಿರುವುದು ಸರಿಯಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಾಸ್ಟೆಲ್ ಊಟದಲ್ಲಿ ಹುಳುಗಳು ಪತ್ತೆ; ವಿದ್ಯಾರ್ಥಿಗಳ ಪ್ರತಿಭಟನೆ
ಜಿಐಒ ಬೆಂಗ್ರೆಯ ಸಂಚಾಲಕಿ ಅಸ್ಮಿನಾ ಮಾತನಾಡಿ, “ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸಲು ನಾವೆಲ್ಲರೂ ಸೇರಿ ಹೋರಾಡಬೇಕು” ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಮತ್ತು ಶಿಕ್ಷಣದ ಮೂಲ ಭಾಗಿದಾರರು ತಮ್ಮ ಹಕ್ಕಿಗಾಗಿ ಆಗ್ರಹಿಸಿದರು. ಎಸ್‌ಐಒ ಜಿಲ್ಲಾಧ್ಯಕ್ಷ ಆಸಿಫ್, ಜಿಲ್ಲಾ ಕಾರ್ಯದರ್ಶಿ ಅಯಾನ್, ಬೆಂಗ್ರೆ ಘಟಕದ ಅಧ್ಯಕ್ಷ ಅಬ್ದುಲ್ ರಫಿ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.