ಅಲೆಮಾರಿಗಳ ‘ಅಸ್ಮಿತೆ’ಗೊಂದು ಆಯೋಗ ಬೇಕೆ?

Date:

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಸಲಹೆಯನ್ನು ನೀಡಿ ಈಗಾಗಲೇ ಹದಿನಾಲ್ಕು ವರ್ಷಗಳಾಯಿತು. ದುರಂತವೆಂದರೆ ಇಂದಿಗೂ ಅಲೆಮಾರಿಗಳು ತಮಗೊಂದು ಆಯೋಗ ಮಾಡಿ ತಮ್ಮ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ತಮ್ಮ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಗುರುತಿಸಿ, ತಮಗೊಂದು ಅಸ್ಮಿತೆ ನೀಡಬೇಕೆಂದು ಸರ್ಕಾರಗಳನ್ನು ಸತತವಾಗಿ ಬೇಡುತ್ತಲೇ ಬಂದಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ಸಮಯದಲ್ಲಾದರೂ ತಮಗೆ ಆಯೋಗ ಆಗಬಹುದೆಂಬ ಆಸೆಗಣ್ಣುಗಳಿಂದ ಅಲೆಮಾರಿಗಳು ಕಾಯುತಿದ್ದಾರೆ.

ಕಲಾವಿದ ಸ್ಟೀಫನ್ ಡಿಸೋಜ ರೊಟ್ಟಿಯೊಂದನ್ನು ಫ್ರೇಮ್ ನಲ್ಲಿಟ್ಟು ಒಂದು ಕಲಾಕೃತಿಯನ್ನು ರಚಿಸಿದ್ದರು. ಇದನ್ನು ‘ಬೀ-ಕಲ್ಚರ್’ ಸಂಸ್ಥೆ ನಾಡಿನ ಇತರೆ ಕಲಾವಿದರ ಕಲಾಕೃತಿಗಳೊಂದಿಗೆ ರಾಹುಲ್ ಗಾಂಧಿಯವರ “ಭಾರತ್ ಜೋಡೋ” ಯಾತ್ರೆಯಲ್ಲಿ ಪ್ರದರ್ಶಿಸಿತ್ತು. ಈ ರೊಟ್ಟಿ ಚಿತ್ರ ರಾಹುಲ್ ಗಾಂಧಿಯವರ ಗಮನವನ್ನೂ ಸೆಳೆದಿತ್ತು.

ಈಚೆಗೆ “ಅಲೆಮಾರಿ ಬುಡಕಟ್ಟು ಮಹಾಸಭ” ಸಂಘಟನೆ ತನ್ನೊಂದಿಗೆ ಸುಮಾರು 32 ಅಲೆಮಾರಿ ಸಮುದಾಯಗಳನ್ನು ಸಂಘಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ರೊಟ್ಟಿಯ ಕಲಾಕೃತಿಯನ್ನು ಅವರಿಗೆ ಅರ್ಪಿಸಿ ಅಲೆಮಾರಿಗಳಿಗಾಗಿ ಆಯೋಗವೊಂದನ್ನು ರಚಿಸಬೇಕೆಂದು ಮನವಿ ಮಾಡಿತು. ಹಸಿವು ಮತ್ತು ಅನುಭಾವವನ್ನು ಸೂಚಿಸುವ “ಈ ರೊಟ್ಟಿ ಚಿತ್ರವನ್ನು ನೋಡಿದಾಗಲೆಲ್ಲ ಅಲೆಮಾರಿಗಳಿಗೆ ಆಯೋಗ ಮಾಡಬೇಕೆಂಬ ವಿಷಯ ನೆನಪಾಗಲಿ” ಎಂದೇ ಅಲೆಮಾರಿ ಬುಡಕಟ್ಟು ಮಹಾಸಭಾ ಮುಖ್ಯಮಂತ್ರಿಗಳಿಗೆ ಈ ಚಿತ್ರ ನೀಡಿತ್ತು.

ಇದನ್ನು ಓದಿದ್ದೀರಾ?: ಲಂಕೇಶರನ್ನು ಗ್ರಹಿಸುವ, ಅವರ ಸಾಹಿತ್ಯಕ್ಕೆ ಮುಖಾಮುಖಿಯಾಗಲು ಹಾದಿ ತೋರುವ ʼಮಣ್ಣಿನ ಕಸುವುʼ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಲೆಮಾರಿಗಳು ಎಲ್ಲಿ ವಾಸವಾಗಿದ್ದಾರೆ ಎಂಬುದು ಸರ್ಕಾರಕ್ಕೂ ಅರಿವಿಲ್ಲ, ಸರ್ಕಾರದ ಅಧಿಕಾರಿಗಳಿಗೂ ತಿಳಿದಿಲ್ಲ. ಎಲ್ಲೋ ಪಾಳುಬಿದ್ದ ಮಂಟಪಗಳಲ್ಲಿ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಹಿಂಬಾಗದಲ್ಲಿ, ರಸ್ತೆ ಬದಿಯ ಹಳ್ಳಗಳಲ್ಲಿ, ಕುರುಚಲು ಬೆಳೆದ ರಣಬಿಸಿಲಿನ ಒಣಭೂಮಿಯಲ್ಲಿ, ಸ್ಮಶಾನಗಳಲ್ಲಿ ಕೌದಿ, ಹರಿದ ಹಳೇಸೀರೆ, ಗೋಣಿಚೀಲಗಳ ಟೆಂಟುಗಳನ್ನು, ಗುಡಾರಗಳನ್ನು ಹಾಕಿಕೊಂಡು ಬದುಕುತ್ತಿರುವ ಅಲೆಮಾರಿ, ಅರೆಅಲೆಮಾರಿಗಳು ಸಹಜವಾಗಿ ‘ಸಭ್ಯ ಸಮಾಜ’ದ ಕಣ್ಣಿಗೆ ಕಾಣುವುದಿಲ್ಲ! ಈ ಕಾರಣಕ್ಕೆ ಈ ಸಮುದಾಯಗಳಿಗೆ ಸರ್ಕಾರದ ಯಾವುದೇ ಅನುದಾನ, ಸಾಲಸೋಲ, ತರಬೇತಿ, ಮನೆಮಠ, ಶಿಕ್ಷಣ, ಆರೋಗ್ಯಕ್ಕೆ ಸಂಭಂದಿಸಿದ ಯಾವುದೇ ಸೌಲಭ್ಯಗಳು ಇವರಿಗೆ ತಲುಪುವುದೇ ಇಲ್ಲ.

ಇದರೊಂದಿಗೆ ಈ ಅಲೆಮಾರಿ ಸಮುದಾಯಗಳ ಗುರುತಿಸುವಿಕೆಗೆ(ಅಸ್ಮಿತೆ) ಸಂಭಂದಿಸಿದಂತೆ ಅನೇಕ ಗೊಂದಲಗಳಿವೆ. ಈ ಗೊಂದಲಗಳನ್ನು ಸರಿಪಡಿಸದ ಹೊರತು ಈ ಅಲೆಮಾರಿ ಸಮುದಾಯಗಳ ಅಸ್ಮಿತೆಯನ್ನು ಗುರುತಿಸಲಾಗುವುದಿಲ್ಲ. ಇವರಿಗೆ ಸರ್ಕಾರದ ಯಾವ ನೆರವೂ, ಅನುದಾನ ಯಾವುದೂ ದಕ್ಕುವುದಿಲ್ಲ. ಇದರೊಂದಿಗೆ ಸದರಿ ಅಲೆಮಾರಿಗಳನ್ನು ಅನೇಕ ಪ್ರವರ್ಗಗಳಲ್ಲಿ ಅವೈಜ್ಞಾನಿಕವಾಗಿ ಹಂಚಿಬಿಟ್ಟಿದ್ದಾರೆ! ಉದಾಹರಣೆಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮುಸ್ಲಿಂ ಅಲೆಮಾರಿಗಳೂ ಸೇರಿದಂತೆ 46 ಅಲೆಮಾರಿಗಳು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51 ಅಲೆಮಾರಿಗಳು, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 23 ಅಲೆಮಾರಿಗಳು, ಹೀಗೆ ಒಟ್ಟಾರೆ ನಮಗೆ ಲೆಕ್ಕಕ್ಕೆ ಸಿಕ್ಕಿರುವ 120 ಅಲೆಮಾರಿ ಸಮುದಾಯಗಳಿವೆ. ಇನ್ನೂ ಯಾವ ಪಟ್ಟಿಗೂ ಸೇರದ ಅನೇಕ ಅಲೆಮಾರಿ ಸಮುದಾಯಗಳಿವೆ ಎಂಬುದೂ ಇಲ್ಲಿ ಗಮನಾರ್ಹ. ಇವುಗಳನ್ನೂ ಗುರುತಿಸಿ ಪಟ್ಟಿಗೆ ಸೇರಿಸುವ ಜವಾಬ್ದಾರಿಯೂ ಸರ್ಕಾರ ಮಾಡಲಾಗುವ ಆಯೋಗಕ್ಕೇ ಬರುತ್ತದೆ.

ಇವುಗಳಲ್ಲಿ ಅನೇಕ ಸಮುದಾಯಗಳು ಹಿಂದುಳಿದ ಮತ್ತು ಎಸ್.ಸಿ.ಪಟ್ಟಿಯಲ್ಲಿವೆ. ಇವುಗಳ ಪರ್ಯಾಯ ಪದಗಳ ಜ್ಞಾನ ಸರ್ಕಾರಕ್ಕೆ ಇಲ್ಲದ ಕಾರಣಕ್ಕೆ ಸರ್ಕಾರದ ಅಧಿಕಾರಿ ಬೃಹಸ್ಪತಿಗಳು ಅನೇಕ ರೀತಿಯ ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಉದಾಹರಣೆಗೆ ದೊಂಬಿದಾಸ ಮತ್ತು ಚೆನ್ನದಾಸ ಒಂದೇ ಆಗಿದ್ದರೂ ದೊಂಬಿದಾಸ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇದ್ದರೆ ಚೆನ್ನದಾಸ ಎಸ್.ಸಿ.ಪಟ್ಟಿಯಲ್ಲಿದೆ ಹೀಗೆ ಕಿಳ್ಳೀಕ್ಯಾತ, ಶಿಳ್ಳೇಕ್ಯಾತ ಒಂದೇ ಆಗಿದ್ದರೂ ಇವೆರಡೂ ಎರಡು ಪಟ್ಟಿಗಳಿವೆ.

ಈ ಗೊಂದಲಗಳನ್ನು ಸರಿಪಡಿಸಬೇಕೆಂದು ನಮ್ಮ ಹಿಂದುಳಿದ ವರ್ಗಗಳ ಆಯೋಗ “ಕಿಲ್ಲಿಕ್ಯಾತ, ದೊಂಬಿದಾಸ, ಚಕ್ರವಾದ್ಯದಾಸ, ದಂಗದಾಸ, ದಾಸರು, ಬೈರಾಗಿ, ಬಾಲಸಂತ, ಬಹುರೂಪಿ, ದುರ್ಗಾಮುರ್ಗಿ, ಬುರ್ ಬುರ್ ಚ ಎಂಬ ಪರ್ಯಾಯ ಪದಗಳನ್ನು ಹಿಂದುಳಿದ ವರ್ಗದ ಪಟ್ಟಿಯಿಂದ ವಜಾಗೊಳಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿತ್ತು(ಸಲಹೆ ಸಂಖ್ಯೆ 11/2009) ಆದರೆ ಸರ್ಕಾರಗಳು ಈ ಸಲಹೆಯತ್ತ ನೋಡಲೇ ಇಲ್ಲ.

ಇದೇ ಕಾರಣಕ್ಕೆ ಅನೇಕ ಅಲೆಮಾರಿಗಳಿಗೆ ಜಾತಿ ಸರ್ಟಿಫಿಕೇಟ್ ಸಿಗುತ್ತಿಲ್ಲ. ಜಾತಿ ಪ್ರಮಾಣಪತ್ರ ನೀಡುವ ತಹಸೀಲ್ದಾರರಿಗೆ ಈ ಸಮುದಾಯಗಳ ಕುರಿತು ಅರಿವೂ ಇಲ್ಲ ಸರಿಯಾದ ಮಾಹಿತಿಯೂ ಇಲ್ಲ, ಅನೇಕರಿಗೆ ಕಾಳಜಿಯೂ ಇಲ್ಲ. ಇಂತಹ ಬಹುತೇಕ ಗೊಂದಲಗಳ ಕಾರಣಕ್ಕೆ ಅನೇಕ ಅಲೆಮಾರಿ ಸಮುದಾಯಗಳು ಅಸ್ಮಿತೆಯ ಕೊರತೆ(identity crisis)ಯಿಂದ ನರಳುತ್ತಿವೆ.

ಈ ಎಲ್ಲಾ ಸಮಸ್ಯೆಗಳನ್ನು ಒಮ್ಮೆಗೇ ಪರಿಹರಿಸಬೇಕಾದರೆ ಅದಕ್ಕೆ “ಅಲೆಮಾರಿ ಆಯೋಗ” ರಚಿಸುವುದೊಂದೇ ಮಾರ್ಗ. ಆದರೆ ಇಲ್ಲಿ ಶಾಶ್ವತ ಆಯೋಗ ಬೇಕಿಲ್ಲ. Terms of reference ನೊಂದಿಗೆ ಮೂರು ವರ್ಷಕ್ಕೆ ತಾತ್ಕಾಲಿಕ ಆಯೋಗ ಮಾಡಿದರೆ ಸಾಕು, ಸಾಕಷ್ಟು ಅಂಕಿಅಂಶ ಕಲೆ ಹಾಕುವುದು, ಸಾರ್ವಜನಿಕ ವಿಚಾರಣೆ, ದ್ವಿತೀಯ ಮೂಲದ ಮಾಹಿತಿ, ಕುಲಶಾಸ್ತ್ರೀಯ ಅಧ್ಯಯನ ಮತ್ತು ಸ್ಥಳ ಪರಿಶೀಲನೆ ಮಾಡಿ ನಿಕರವಾದ ಸಲಹೆ/ ಶಿಫಾರಸ್ಸನ್ನು ಸರ್ಕಾರಕ್ಕೆ ನೀಡಬಹುದು.

2006 ರಲ್ಲಿ ಕೇಂದ್ರ ಸರ್ಕಾರ ಬಾಲಕೃಷ್ಣ ರೇಣುಕೆಯವರ ನೇತೃತ್ವದಲ್ಲಿ ರಾಷ್ಟ್ರೀಯ ಅಲೆಮಾರಿಗಳ ಆಯೋಗ ನೇಮಿಸಿ.‌ ಅಲೆಮಾರಿ ಸಮುದಾಯಗಳ ಅಸ್ಮಿತೆ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆಗಳನ್ನು ಮತ್ತು ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು “ಉಲ್ಲೇಖದ ನಿಯಮಗಳ”ನ್ನು(terms of reference) ನೀಡಿತು. ಆ ಸಂಧರ್ಭದಲ್ಲಿ ರೇಣುಕೆ ಆಯೋಗ ನಮ್ಮ ಹಿಂದುಳಿದ ವರ್ಗಗಳ ಆಯೋಗದೊಂದಿಗೂ ಸುದೀರ್ಘ ಚರ್ಚೆ ನಡೆಸಿತ್ತು. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಈ ಕುರಿತು ಅನೇಕ ಚರ್ಚಾ ಸಭೆಗಳೂ ಆಗಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಅಲೆಮಾರಿ ಆಯೋಗ ರಚಿಸಬೇಕೆಂದು ಆಗಲೇ ತೀರ್ಮಾನಿಸಿ ನಮ್ಮ ಹಿಂದುಳಿದ ವರ್ಗಗಳ ಆಯೋಗದಿಂದ ಈ ಕೆಳಗಿನಂತೆ ಸರ್ಕಾರಕ್ಕೆ ಸಲಹೆಯೊಂದನ್ನು ಕೂಡ ನೀಡಲಾಯಿತು.

ವಿಶೇಷ ವರದಿ 02/2006

ಕೇಂದ್ರ ಸರ್ಕಾರ ದಿನಾಂಕ 06.02.2006ರ ಅದಿಸೂಚನೆಯಲ್ಲಿ ಕಾಣಿಸಲಾದ terms of reference ರೀತ್ಯಾ ಕರ್ನಾಟಕ ರಾಜ್ಯ ಸರ್ಕಾರವೂ ಕೂಡ ಅಲೆಮಾರಿ ಜನಾಂಗದವರ ಜೀವನಮಟ್ಟ ಇತ್ಯಾದಿಗಳ ಬಗ್ಗೆ ಅದ್ಯಯನ ನಡೆಸಿ ಅವರ ಅಭಿವೃದ್ಧಿ ಕುರಿತಂತೆ ಸೂಕ್ತ ಸಲಹೆ/ ಶಿಫಾರಸು ಮಾಡುವುದಕ್ಕಾಗಿ ಒಂದು ಪ್ರತ್ಯೇಕ ಆಯೋಗದ ರಚನೆಯ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಅಭಿಪ್ರಾಯ ನೀಡಬಹುದೆಂದು ತೀರ್ಮಾನಿಸಿತು. ಕೇಂದ್ರ  ಸರ್ಕಾರವು ಅಲೆಮಾರಿ ಜನಾಂಗದ ಆಯೋಗವನ್ನು ರಚಿಸುವಲ್ಲಿ ನಿಗದಿಪಡಿಸಲಾದ terms of reference ಗಳನ್ನೇ ನಿಗದಿಪಡಿಸುವುದರ ಜೊತೆಗೆ, ಹೆಚ್ಚುವರಿಯಾಗಿ ಸಂಖ್ಯೆ (ಇ) ಅಲೆಮಾರಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಬೇಕೆಂಬ ಅಂಶವನ್ನು (conduct socio-educational and economic survey of the nomadic tribes) ಕೂಡ ಸೇರ್ಪಡೆ ಮಾಡಲು ನಿರ್ಣಯಿಸಲಾಯಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಸಲಹೆಯನ್ನು ನೀಡಿ ಈಗಾಗಲೇ ಹದಿನಾಲ್ಕು ವರ್ಷಗಳಾಯಿತು. ದುರಂತವೆಂದರೆ ಇಂದಿಗೂ ಅಲೆಮಾರಿಗಳು ತಮಗೊಂದು ಆಯೋಗ ಮಾಡಿ ತಮ್ಮ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ತಮ್ಮ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಗುರುತಿಸಿ, ತಮಗೊಂದು ಅಸ್ಮಿತೆ ನೀಡಬೇಕೆಂದು ಸರ್ಕಾರಗಳನ್ನು ಸತತವಾಗಿ ಬೇಡುತ್ತಲೇ ಬಂದಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ಸಮಯದಲ್ಲಾದರೂ ತಮಗೆ ಆಯೋಗ ಆಗಬಹುದೆಂಬ ಆಸೆಗಣ್ಣುಗಳಿಂದ ಅಲೆಮಾರಿಗಳು ಕಾಯುತಿದ್ದಾರೆ.

– ಡಾ. ಸಿ.ಎಸ್ ದ್ವಾರಕಾನಾಥ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದ್ವಿತೀಯ ಪಿಯುಸಿ | ಮೊದಲ ದಿನ 18,231 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ರಾಜ್ಯಾದ್ಯಂತ ಮಾರ್ಚ್‌ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ...

ಬಿಬಿಎಂಪಿ | ನೀರಿನ ಟ್ಯಾಂಕರ್ ಸ್ವಯಂ ನೋಂದಣಿಗೆ ಮಾರ್ಚ್‌ 7 ಕೊನೆ ದಿನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ...

ರಾಮೇಶ್ವರಂ ಕೆಫೆ | ಎನ್‌ಐಎ, ಐಬಿಗೆ ಸ್ಪೋಟದ ಬಗ್ಗೆ ಮಾಹಿತಿ: ಅಲೋಕ್​ ಮೋಹನ್

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒಟ್ಟು 9 ಮಂದಿ ಗಂಭೀರವಾಗಿ...

ಬೀದರ್‌ | ಕಾಂಗ್ರೆಸ್‌ನಿಂದ ಮಾದಿಗ ಸಮುದಾಯದ ಕಡೆಗಣನೆ: ಫರ್ನಾಂಡಿಸ್‌ ಹಿಪ್ಪಳಗಾಂವ್

2‌023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಮಾದಿಗ ಸಮುದಾಯದ ಒಬ್ಬರಿಗೂ...