- ರೈತ ಸಂಘದ ಹಿರಿಯರ ಸಲಹೆ ಪಡೆದು ಸದನದಲ್ಲಿ ರೈತರ ಪರ ದ್ವನಿ ಎತ್ತುವೆ
- ತಂದೆಯ ಹಾದಿಯಲ್ಲಿ ಸಾಗುವ ನನಗೆ ರಾಜಕೀಯಕ್ಕಿಂತ ಚಳವಳಿಯೇ ಮುಖ್ಯ
ರಾಜ್ಯ ರೈತ ಸಂಘ ಬಲವರ್ಧನೆ ಮಾಡುವುದು, ಹಳ್ಳಿ ಹಳ್ಳಿಗಳಲ್ಲಿಯೂ ಸಂಘಟನೆ ಸಂಘಟಿಸುವುದು ನನ್ನ ಮೊದಲ ಆದ್ಯತೆ ಎಂದು ಮಂಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ರೈತ ಸಂಘದ ಹಿರಿಯರ ಸಲಹೆ ಪಡೆದು ವಿಧಾನಸೌಧದಲ್ಲಿ ದ್ವನಿ ಎತ್ತುವುದಾಗ ರೈತರ ಪರವಾಗಿ ನಿಲ್ಲುವೆ ಎಂದು ತಿಳಿಸಿದರು.
ನನ್ನ ತಂದೆ ಕೆ ಎಸ್ ಪುಟ್ಟಣ್ಣಯ್ಯ ಅವರು ರೈತ ಸಂಘದಲ್ಲಿ ರೈತರ ಪರವಾಗಿ ಹೋರಾಟ ಮಾಡಿ ಶಾಸಕರಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಿದವರು. ಅವರ ಮಾರ್ಗದಲ್ಲಿ ನಡೆಯುವೆ ರೈತ ಪರವಾಗಿ, ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದರು.
ಪತ್ರಕರ್ತರು ಮುಂದಾದಗಲೆಲ್ಲ ನಿಮಗೆ ಸಂಘಟನೆ ಮುಖ್ಯಾನಾ? ರಾಜಕೀಯ ಮುಖ್ಯಾನ!? ಎನ್ನುವ ಪ್ರಶ್ನೆ ನನ್ನ ಮುಂದಿಡುತ್ತಾರೆ. ರೈತ ಸಂಘ ಉದಯವಾಗಿ ನಾಲ್ಕು ದಶಕ ಕಳೆದಿದೆ ನಮ್ಮ ತಂದೆಯ ಹಾದಿಯಲ್ಲಿ ನಡೆಯುವೆ ನನಗೆ ಚಳವಳಿಯೇ ಮುಖ್ಯ ಎಂದು ಹೇಳಿದರು.
ನನ್ನ ಗೆಲುವಿಗಾಗಿ ಹಲವು ಸಂಘಟನೆಗಳು, ಪ್ರಗತಿಪರರು, ದಲಿತ ಸಂಘರ್ಷ ಸಮಿತಿ, ಪ್ರಜ್ಞಾವಂತರು, ಹಿತೈಷಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಚುನಾವಣಾ ಖರ್ಚಿಗೆ ಹಣ ಕೊಟ್ಟಿದ್ದಾರೆ. ಇವತ್ತಿನ ಗೆಲುವಲ್ಲಿ ಎಲ್ಲರ ಶ್ರಮ ಅಡಗಿದೆ. ಇದು ಎಲ್ಲರಿಗೂ ಸಲ್ಲಬೇಕಾದ ಸನ್ಮಾನ ಎಂದರು.
ಕಾಂಗ್ರೆಸ್ ವಿರುದ್ಧ ಹೋರಾಟಕ್ಕೂ ಹಿಂಜರಿಯುವುದಿಲ್ಲ; ಬಡಗಲಪುರ ನಾಗೇಂದ್ರ
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಜನ ವಿರೋಧಿ, ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿ ತೊಲಗಿದೆ. ಈಗ ಬಂದಿರುವ ಸರ್ಕಾರ ರೈತರ ಎಲ್ಲ ಕಷ್ಟ ಬಗೆಹರಿಸುತ್ತೆ ಇನ್ನ ಮುಂದೆ ಸಮಸ್ಯೆಗಳು ಇಲ್ಲವೇ ಇಲ್ಲ ಅನ್ನುವಂತೆ ಇಲ್ಲ. ಪರ್ಯಾಯವಾಗಿ ಈಗಿನ ಸರ್ಕಾರ ಬಂದಿದೆ ಹೊರತು ನಾಳೆ ತಪ್ಪು ಮಾಡಿದಾಗ ಬೀದಿಯಲ್ಲಿ ನಿಂತು ಇವರ ವಿರುದ್ಧವೂ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಒಂದು ಆಶಾವಾದ ಎಂದರೆ ಕಾಂಗ್ರೆಸ್ ಸರ್ಕಾರದ ಮುಂದೆ ಹೊರಾಟವನ್ನಾದರೂ ಮಾಡಬಹುದು. ಆದರೆ, ಹಿಂದೆ ಇದ್ದ ಸರ್ಕಾರಕ್ಕೆ ಹೋರಾಟ, ಹೋರಾಟಗಾರರು ಎನ್ನುವ ಬೆಲೆಯೇ ಇರಲಿಲ್ಲ. ಕಿವಿ, ಕಣ್ಣು ಇರಲೇ ಇಲ್ಲ ಬೆನ್ನುಮೂಳೆ ಇರದ ಸರ್ಕಾರ ಭಂಡತನ ಪ್ರದರ್ಶನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಡಲ ತೀರದ ದಲಿತ ಕುಟುಂಬಗಳ ತೆರವು ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ
ಚಳವಳಿಯಲ್ಲಿ ಬಂದಿರುವ ದರ್ಶನ್ ತಂದೆಯವರಂತೆ ಚಳವಳಿ ರಾಜಕೀಯಕ್ಕೆ ಮುಂದಾಗಲಿದ್ದಾರೆ. ಸದನದಲ್ಲಿ ಚಳವಳಿಯ ಪ್ರತಿನಿಧಿಯಾಗಿ ಧನಿ ಎತ್ತಲಿದ್ದಾರೆ. ರಾಜ್ಯ ರೈತ ಸಂಘ ಬಲವಾಗಿ ಸಂಘಟನೆ ಮಾಡುವುದರ ಮೂಲಕ ರಾಜ್ಯದ ರೈತರ ಪರವಾಗಿ ಹೋರಾಟ ಮುಂದುವರಿಸಲಿದೆ. ಯಾರೇ ತಪ್ಪು ಮಾಡಿದರೂ ಹೋರಾಟಕ್ಕೆ ಹಿಂದೆ ಮುಂದೆ ನೋಡದೆ ಬೀದಿಗೆ ಇಳಿದು ಖಂಡಿಸಲಿದೆ. ದರ್ಶನ್ ಅವರು ಸದನದಲ್ಲಿ ರೈತರಿಗೆ ಅನ್ಯಾಯ ಆಗದಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ರವಿಕಿರಣ್ ಪೂಣಚ್ಚ, ಮಹೇಶ್ ಪ್ರಭು, ಮನು ಸೋಮಯ್ಯ, ಅಶ್ವತ್ಥ ನಾರಾಯಣ ರಾಜೆ ಅರಸ್, ಪ್ರಸನ್ನ ಎನ್ ಗೌಡ, ಮಧುಚಂದನ್, ಪಿ ಮರಂಕಯ್ಯ, ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ, ಅಲಗೂಡು ಶಿವಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.