ಬರೋಬ್ಬರಿ ನಾಲ್ಕು ಮದುವೆಯಾಗಿ ಪತ್ನಿಯರಿಗೆ ವಂಚಿಸಿ ಓಡಾಡುತ್ತಿದ್ದ ಆರೋಪಿಯನ್ನು ಪತ್ನಿಯರೇ ಹಿಡಿದು, ನಡು ರಸ್ತೆಯಲ್ಲೇ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೊಹಮ್ಮದ್ ವಾಸಿಂ ಅಲಿಯಾಸ್ ಸಲ್ಮಾನ್ ಖಾನ್ ಸಾದಿಕ್ ಎಂಬ ವ್ಯಕ್ತಿ ನಾಲ್ಕು ಮದುವೆ ಆಗಿ, ಪತ್ನಿಯರಿಂದ ಹಣ, ಚಿನ್ನಾಭರಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯಾಗಿದ್ದಾನೆ.
ದಾವಣಗೆರೆಯ ಆಜಾದ್ ನಗರದ ನಿವಾಸಿಯಾಗಿರುವ ಈತ, ವಿಧವೆಯರು ಹಾಗೂ ಗಂಡ ಬಿಟ್ಟು ಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ನಂಬಿಸಿ ಮದುವೆಯಾಗಿ ಮೋಸ ಮಾಡುತ್ತಿದ್ದನು. ಮದುವೆಯಾದ ಬಳಿಕ ಪತ್ನಿಯರಿಂದ ಚಿನ್ನ, ಹಣ ಪಡೆದು ವಂಚನೆ ಮಾಡಿದ್ದಾನೆಂದು ಪತ್ನಿಯರೇ ಆರೋಪಿಸಿದ್ದಾರೆ.
“ಹರಿಹರದಲ್ಲಿ ಮೊದಲ ಮದುವೆ, ದಾವಣಗೆರೆಯ ಮಲೇಬೆನ್ನೂರಿನಲ್ಲಿ ಎರಡನೇ ಮದುವೆ, ಆಜಾದ್ ನಗರದಲ್ಲಿ ಮೂರನೇ ಹಾಗೂ ಭಾಷಾ ನಗರದಲ್ಲಿ ನಾಲ್ಕನೇ ವಿವಾಹವಾಗಿ ನಮ್ಮನ್ನು ವಂಚಿಸಿದ್ದಾನೆ” ಎಂದು ಪತ್ನಿಯರು ಆರೋಪಿಸಿದರು.
“ದಾವಣಗೆರೆ ನಗರದ ಬೂದಾಳ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಾಲ್ಕನೇ ಪತ್ನಿಯೊಂದಿಗೆ ಸಂಸಾರ ಮಾಡುತ್ತಿದ್ದ. ಆರ್‌ಟಿಒ ಕಚೇರಿ ಬಳಿಯ ಬೂದಾಳ್ ರಸ್ತೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ” ಎಂದು ತಿಳಿಸಿದರು.
“2009ರಲ್ಲಿ ಮದುವೆಯಾಗಿ ಕಿರುಕುಳ ನೀಡಿದ್ದು, ಹದಿನೈದು ತೊಲ ಒಡವೆಗಳನ್ನು ಮಾರಾಟ ಮಾಡಿದ್ದ. ಮನೆಯೊಂದನ್ನು ಮಾರಾಟ ಮಾಡಿದ್ದಾನೆ. ನನ್ನನ್ನು, ಮಕ್ಕಳನ್ನು ಬೀದಿಪಾಲು ಮಾಡಿದ್ದಾನೆ” ಎಂದು ಮೊದಲ ಹೆಂಡತಿ ಆರೋಪಿಸಿದ್ದು, ದಾವಣಗೆರೆಯಲ್ಲಿ ಸಂಘಟನೆಗಳನ್ನು ಮಾಡಿದ್ದು, ನಗರದ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ, ಹಣ ಕೊಡಿಸುವುದಾಗಿ ವಂಚನೆ ಮಾಡಿದ್ದಾನೆ” ಎಂದು ಪತ್ನಿಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ಲೋಪ ಆರೋಪ; ಸಮರ್ಪಕ ಆಡಳಿತಕ್ಕೆ ರಾಜ್ಯ ರೈತ ಸಂಘ ಆಗ್ರಹ
“ಸಂಘದಲ್ಲಿ ಹಣ ಕೊಡಿಸುವುದಾಗಿ 70ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದಾನೆ. ಕಮಿಷನ್ ಪಡೆದು, ಮನೆ ಲೀಸ್‌ಗೆ ಹಾಕುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ. ತಮಗೆ ಲಕ್ಷಾಂತರ ರೂಪಾಯಿ ಕೊಡಬೇಕಿದೆ” ಎಂದು ದೂರಿದರು.
ಮೋಸದ ಕುರಿತಂತೆ ಈ ಹಿಂದೆಯೇ ಗಾಂಧಿನಗರ ಹಾಗೂ ಅಜಾದ್‌ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.