‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

Date:

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಯೋಜನೆ ಜಾರಿಯಲ್ಲೇ ಅರಾಜಕತೆ ಸೃಷ್ಟಿಯಾಗಿದೆ.

ಬರ, ಮಳೆ ಕೊರತೆ ಹಾಗೂ ಕೃಷಿ ಚಟುವಟಿಕೆ ಕುಂಠಿತಗೊಂಡಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಭರವಸೆಯಾಗಬೇಕಿದ್ದ ಯೋಜನೆಯಡಿ ಕೆಲಸ ಮಾಡಿದರೂ ಸಮಯಕ್ಕೆ ಕೂಲಿ ಸಿಗದಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಬಾಗಲಕೋಟೆ ಜಿಲ್ಲೆಯ 175 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ಗ್ರಾಮಗಳಲ್ಲಿ ಪ್ರಚಾರ ನಡೆಸಿ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಆದರೆ ಕಾಮಗಾರಿ ಆರಂಭಿಸಿದ ಬಳಿಕ ಅದರ ಮುಂದಿನ ಹಂತದ ಪ್ರಕ್ರಿಯೆಗಳು ತಾಂತ್ರಿಕ ಕಾರಣಗಳಿಂದ ನಿಧಾನಗೊಳ್ಳುತ್ತಿರುವ ಆರೋಪ ಕೇಳಿಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಜೂನ್‌ನಿಂದ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ನೂರಾರು ಕಾರ್ಮಿಕರು ಕೆಲಸ ಮಾಡಿದ್ದಾರೆ. ಆದರೆ ಮೂರು ತಿಂಗಳು ಕಳೆದರೂ ದುಡಿದ ಹಣ ಕೈ ಸೇರದಿರುವುದು ಕಾರ್ಮಿಕರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ದುಡಿದವರಿಗೆ ಕೂಲಿ ನೀಡುವುದೇ ಯೋಜನೆಯ ಮೂಲ ಉದ್ದೇಶವಾಗಿದ್ದರೆ, ಆ ಕೂಲಿ ಪಾವತಿಗೆ ಇಷ್ಟೊಂದು ವಿಳಂಬ ಏಕೆ? ಎಂಬ ಪ್ರಶ್ನೆ ಇದೀಗ ಗ್ರಾಮೀಣ ಭಾಗದಲ್ಲಿ ಕೇಳಿಬರುತ್ತಿದೆ.

ವೆಬ್‌ಸೈಟ್‌, ಮೊಬೈಲ್ ಆ್ಯಪ್‌ಗಳಲ್ಲೂ ಗೊಂದಲ

ವಿಬಿ-ಜಿ ರಾಮ್ ಜಿ ಯೋಜನೆಯ ಅನುಷ್ಠಾನದಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿರುವುದು ಅಧಿಕಾರಿಗಳಿಗೂ ಸವಾಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಿಆರ್‌ಇಡಿ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಯೋಜನೆ ಹಾಗೂ ಅನುಷ್ಠಾನ ಪ್ರಕ್ರಿಯೆಯಲ್ಲಿ ವೆಬ್‌ಸೈಟ್ ಲಾಗಿನ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎನ್ನಲಾಗಿದೆ.

ಹಾಜರಾತಿ ದಾಖಲಿಸುವುದರಿಂದ ಹಿಡಿದು ಮೇಲಧಿಕಾರಿಗಳ ಅನುಮೋದನೆ ಪಡೆಯಲು ಹಲವು ಹಂತಗಳು ಇರುವುದರಿಂದ ಸಣ್ಣಪುಟ್ಟ ತಾಂತ್ರಿಕ ಅಡಚಣೆಗಳೂ ಪಾವತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ.

ಎನ್‌ಎಂಎಂಎಸ್ ಮೊಬೈಲ್ ಆ್ಯಪ್ ಮೂಲಕ ಕಾರ್ಮಿಕರ ಹಾಜರಾತಿಯನ್ನು ದಾಖಲಿಸುವ ಪ್ರಕ್ರಿಯೆಯೂ ಯೋಜನೆಯಡಿ ಕಡ್ಡಾಯವಾಗಿದೆ. ದಿನದ ಕೆಲಸಕ್ಕೆ ಸಂಬಂಧಿಸಿದಂತೆ ಹಾಜರಾತಿ ದಾಖಲಿಸಿ, ಅದರ ಸಾಕ್ಷ್ಯವನ್ನು ಮೇಲಧಿಕಾರಿಗಳಿಗೆ ಸಲ್ಲಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದರ ಜತೆಗೆ ಅನುಮೋದನೆಗೊಂಡ ಕ್ರಿಯಾಯೋಜನೆಯಲ್ಲಿರುವ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಅವಕಾಶವಿದೆ. ಹೀಗಾಗಿ ಸ್ಥಳೀಯವಾಗಿ ಕೆಲಸದ ಬೇಡಿಕೆ ಇದ್ದರೂ, ಅಗತ್ಯ ಅನುಮೋದನೆ ಮತ್ತು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಸ್ಥಿತಿ ಎದುರಾಗುತ್ತಿದೆ.

ಗ್ರಾಪಂ, ತಾಪಂ ಹಾಗೂ ಜಿಪಂ ಹಂತಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಮತ್ತು ತರಬೇತಿಯ ಕೊರತೆಯೂ ಸಮಸ್ಯೆಗೆ ಮತ್ತಷ್ಟು ಕಾರಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯೋಜನೆಯ ಅನುಷ್ಠಾನದ ಹೊರೆ ಹೊತ್ತಿರುವ ಸಿಬ್ಬಂದಿಗೂ ಸಮಸ್ಯೆ ತಪ್ಪಿಲ್ಲ. ರಾಜ್ಯಾದ್ಯಂತ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 5,804 ನೌಕರರಿಗೆ ಐದು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗ್ರಾಪಂ, ತಾಪಂ ಹಾಗೂ ಜಿಪಂ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಭತ್ಯೆಗಳು ಪಾವತಿಯಾಗಿಲ್ಲ ಎನ್ನಲಾಗಿದೆ. ಆಡಳಿತಾತ್ಮಕ ವೆಚ್ಚಗಳ ಮಂಜೂರಾತಿ ಹಾಗೂ ಸಾಮಗ್ರಿ ಖರೀದಿಗೂ ಹಣದ ಕೊರತೆ ಎದುರಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಒಂದು ಕಡೆ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಬಾಕಿ ಉಳಿದಿದ್ದರೆ, ಮತ್ತೊಂದೆಡೆ ಯೋಜನೆ ಜಾರಿಗೆ ದುಡಿಯುತ್ತಿರುವ ಸಿಬ್ಬಂದಿಯೂ ಪಾವತಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಮನರೇಗಾದಲ್ಲಿ ಇಷ್ಟೊಂದು ಗೊಂದಲ ಇರಲಿಲ್ಲ’

ಈ ಕುರಿತು ಈದಿನ.ಕಾಮ್‌ ಜೊತೆ ಮಾತನಾಡಿದ ಬಾದಾಮಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಶಂಕರ ಹೂಗಾರ,“ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ದೊರೆಯುತ್ತಿತ್ತು. ಆದರೆ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಬಂದ ನಂತರ ನಿರ್ವಹಣೆಯಲ್ಲಿ ಹಲವು ಗೊಂದಲಗಳು ಕಾಣಿಸಿಕೊಂಡಿವೆ. ಕೆಲಸ ಮಾಡಿಸಿಕೊಂಡು ಸಂಬಳ ನೀಡದೆ ಇರುವುದರಿಂದ ಬಡ ಕಾರ್ಮಿಕರ ಮೇಲೆಯೇ ಮತ್ತೊಂದು ಹೊರೆ ಬಿದ್ದಂತಾಗಿದೆ. ಕೂಡಲೇ ದುಡಿದವರ ಕೂಲಿ ಪಾವತಿಸಬೇಕು” ಎಂದು ಆಗ್ರಹಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷ ರಾಜು ವಾರದ,‌ “ವಿಬಿ-ಜಿ ರಾಮ್ ಜಿ ಯೋಜನೆ ಇನ್ನೂ ಅನುಷ್ಠಾನದ ಆರಂಭಿಕ ಹಂತದಲ್ಲಿದೆ. ಹೀಗಾಗಿ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿವೆ. ಅವುಗಳನ್ನು ಸರಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಹಣಕಾಸಿನ ಯಾವುದೇ ಕೊರತೆ ಸರ್ಕಾರದ ಮುಂದಿಲ್ಲ. ಸದ್ಯದ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಗ್ರಾಮೀಣ ಭಾಗದಲ್ಲಿ ಕೃಷಿ ಉದ್ಯೋಗ ಕುಂಠಿತಗೊಂಡಿರುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ಉದ್ದೇಶ ಹೊಂದಿರುವ ಯೋಜನೆಯೇ ಕೂಲಿ ಪಾವತಿ ವಿಳಂಬದಿಂದ ತನ್ನ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಿಸುತ್ತಿದೆ.

ಕಾಮಗಾರಿ ರೂಪಿಸುವುದರಿಂದ ಹಿಡಿದು ಹಾಜರಾತಿ ದಾಖಲಿಸುವುದು, ಅನುಮೋದನೆ ಪಡೆಯುವುದು ಮತ್ತು ಕೂಲಿ ಪಾವತಿಸುವವರೆಗೆ ಇರುವ ಪ್ರಕ್ರಿಯೆ ಸರಳವಾಗಬೇಕು. ಇಲ್ಲವಾದರೆ ಬಡವರಿಗಾಗಿ ರೂಪಿಸಿದ ಉದ್ಯೋಗ ಯೋಜನೆಯ ಲಾಭವೇ ತಾಂತ್ರಿಕ ಅಡಚಣೆಗಳ ನಡುವೆ ಸಿಲುಕುವ ಅಪಾಯ ಎದುರಾಗಲಿದೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...

ಯಾದಗಿರಿ | ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತು ವಿಶೇಷ ಉಪನ್ಯಾಸ

ತತ್ವಪದಕಾರ ಹಾಗೂ ಅವಧೂತ ಶ್ರೀ ರಂಗಲಿಂಗೇಶ್ವರರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕು...

ಬೇಲೂರು | ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಪ್ರಕಾಶ್ ರಾಜ್ ಮಾಲಾರ್ಪಣೆ 

SIR ವಿರೋಧಿ ಒಕ್ಕೂಟದಿಂದ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಬೇಲೂರು...