ಜಿಲ್ಲಾ ಬಿಜೆಪಿ, ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ.ಎಂ. ಸಿದ್ದೇಶ್ವರ ವಿರುದ್ಧ ಹೇಳಿಕೆ, ಟೀಕೆ, ಆರೋಪ ಮಾಡುವುದನ್ನು ಮುಂದುವರಿಸಿದರೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರ ವಿರುದ್ಧ ತಕ್ಷಣವೇ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು, ಪಕ್ಷ ವಿರೋಧಿ ನಡವಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡದಂತೆ ರೇಣುಕಾಚಾರ್ಯರಿಗೆ ಯಡಿಯೂರಪ್ಪರು ಫೋನ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ ಎಂದರು.
ಎಂ.ಪಿ. ರೇಣುಕಾಚಾರ್ಯ ಅವರು ದಿನಕ್ಕೊಮ್ಮೆಯಾದರೂ ಮಾಧ್ಯಮದವರ ಮುಂದೆ ಬಂದು ಬಿಜೆಪಿಯಲ್ಲಿ ಗೊಂದಲ, ಕಾರ್ಯಕರ್ತರಲ್ಲಿ ದ್ವಂದ್ವ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಆಗದು. ಯಡಿಯೂರಪ್ಪ ಅವರೇ ಫೋನ್ ಮಾಡಿ ರೇಣುಕಾಚಾರ್ಯ ಅವರಿಗೆ ಪಕ್ಷಕ್ಕೆ, ಸಿದ್ದೇಶ್ವರ ಅವರಿಗೆ ಮುಜುಗರ ಆಗದಂತೆ ಹೇಳಿಕೆ ನೀಡಬಾರದು ಎಂಬ ಸೂಚನೆ ಕೊಟ್ಟಿದ್ದು, ಯಾವ ರೀತಿ ಪಾಲನೆ ಮಾಡುತ್ತಾರೆ ಎಂಬುದನ್ನು ನೋಡಬೇಕು. ಇದಕ್ಕೆ ಪ್ರತಿಕ್ರಿಯೆ ನೀಡಿದರೆ ಮುಂದೆ ನಾವೂ ಮಾತನಾಡುತ್ತೇವೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಎಂ. ಪಿ. ರೇಣುಕಾಚಾರ್ಯ ಅವರು ದಾವಣಗೆರೆಗೆ ಬರುವುದು, ಮಾಧ್ಯಮದವರ ಜೊತೆ ಮಾತನಾಡುವುದು, ಮುಂಬರುವ ಲೋಕಸಭೆ ಚುನಾವಣೆಗೆ ಹೊರಗಿನವರಿಗೆ ಟಿಕೆಟ್ ಬೇಡ, ಸ್ಥಳೀಯರಿಗೆ ಟಿಕೆಟ್ ನೀಡಿ ಎನ್ನುವುದು ಸಾಮಾನ್ಯವಾಗಿದೆ. ದಿನವೂ ಮಾಧ್ಯಮಗಳ ಮುಂದೆ ಬಂದು ಪಕ್ಷಕ್ಕೆ ಹಾನಿಯಾಗುವಂತೆ ಹೇಳಿಕೆ ನೀಡುವುದರ ಹಿಂದೆ ಯಾರ ಚಿತಾವಣೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂಥ ನಡವಳಿಕೆ ಮುಂದುವರಿಸಿದರೆ ಕ್ರಮ ಖಚಿತ ಎಂಬ ಭರವಸೆ ಸಿಕ್ಕಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಬಿಜೆಪಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸುಮಾರು 40 ಮಂದಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ರೇಣುಕಾಚಾರ್ಯರ ಹೇಳಿಕೆಗಳು, ಪಕ್ಷಕ್ಕಾಗುತ್ತಿರುವ ಹಾನಿ, ಕಾರ್ಯಕರ್ತರಲ್ಲಿ ಮೂಡುತ್ತಿರುವ ಗೊಂದಲ ಸೇರಿದಂತೆ ಎಲ್ಲಾ ವಿಚಾರಗಳನ್ನೂ ತಿಳಿಸಿದ್ದೇವೆ. ಆಗ ಕೂಡಲೇ ಯಡಿಯೂರಪ್ಪನವರು ರೇಣುಕಾಚಾರ್ಯರ ಜೊತೆ ಮಾತನಾಡಿದ್ದಾರೆ. ನಮಗೂ ತಾಳ್ಮೆಯಿತ್ತು. ತಾಳ್ಮೆಯ ಕಟ್ಟೆ ಒಡೆದ ಬಳಿಕ ವರಿಷ್ಠರ ಮುಂದೆ ಮನವಿ ಮಾಡಿದ್ದೇವೆ ಎಂದು ಹರೀಶ್ ಸ್ಪಷ್ಟಪಡಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಕಟ್ಟಿದ್ದು ದಿವಂಗತ ಮಲ್ಲಿಕಾರ್ಜುನಪ್ಪ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರರು. ಅವರ ಬಗ್ಗೆ ಮಾತನಾಡುವ ನೈತಿಕತೆ ರೇಣುಕಾಚಾರ್ಯರಿಗೆ ಇಲ್ಲ. ಒಟ್ಟು ಎಂಟು ಬಾರಿ ಈ ಕುಟುಂಬದವರು ಸ್ಪರ್ಧೆ ಮಾಡಿದ್ದಾರೆ. ದಾವಣಗೆರೆ ಬಿಜೆಪಿ ಭದ್ರಕೋಟೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಳೆದ ಆರು ಚುನಾವಣೆಗಳಲ್ಲಿ ಸೋತಿಲ್ಲ. ಸಿದ್ದೇಶ್ವರ ಅವರ ವಿದ್ಯಾಸಂಸ್ಥೆಗಳು, ಕಾಲೇಜು, ವ್ಯವಹಾರ, ಕ್ಷೇತ್ರವೂ ದಾವಣಗೆರೆಯೇ ಆಗಿದೆ. ಮಲ್ಲಿಕಾರ್ಜುನಪ್ಪ ಹಾಗೂ ಸಿದ್ದೇಶ್ವರ ಅವರು ಲೋಕಸಭಾ ಸದಸ್ಯರಾದ ಬಳಿಕವೂ ಜಿಲ್ಲೆಯ 2 ಸಾವಿರ ಹಳ್ಳಿಗಳಿಗೆ ನಾಲ್ಕೈದು ಬಾರಿ ಭೇಟಿ ನೀಡಿದ್ದಾರೆ. ಆದ್ರೆ, ಇಂಥವರ ವಿರುದ್ಧ ಕಂಟಕ ತರುವ ಹೇಳಿಕೆ ಕೊಟ್ಟರೆ ರಾಜ್ಯ ನಾಯಕರು ಶಿಸ್ತಿನ ಕ್ರಮ ಜರುಗಿಸುವುದು ಖಚಿತ ಎಂದು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪರೇ ಹೇಳಿದ್ದಾರೆ. ಹಾಗಾಗಿ ಯಾವ ಮುಖಂಡರು, ಕಾರ್ಯಕರ್ತರು ಇಂಥವರ ಜೊತೆ ಹೋಗಬಾರದು. ಟಿಕೆಟ್ ನಿರ್ಣಯಿಸುವುದು ರಾಜ್ಯ, ಜಿಲ್ಲಾ ಮುಖಂಡರಲ್ಲ. ಪಕ್ಷದ ಹೈಕಮಾಂಡ್. ಯಾರನ್ನೇ ಅಭ್ಯರ್ಥಿ ಮಾಡಿದರೂ ಧರ್ಮ, ಸಂಸ್ಕತಿ ಉಳಿಸಲು, ದೇಶಕ್ಕಾಗಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಲು ದೇಶಭಕ್ತ ಬಿಜೆಪಿ ಕಾರ್ಯಕರ್ತರು ದುಡಿಯಬೇಕು. ಅಭ್ಯರ್ಥಿ ಯಾರೇ ಆದರೂ ಗೆಲುವಿಗೆ ಶ್ರಮಿಸೋಣ. ಟೀಕೆ ಮಾಡುವವರಿಗೆ ಸಹಕರಿಸಬೇಡಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಬಿ. ಎಸ್. ಜಗದೀಶ್, ಹನುಮಂತ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮಾಧ್ಯಮ್ ಪ್ರಮುಖ್ ಎಚ್. ಪಿ. ವಿಶ್ವಾಸ್, ಗಂಗಾಧರ್ ಮತ್ತಿತರರು ಹಾಜರಿದ್ದರು.