ಇನ್ನೂ ಮೂರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಸಂಘಟಿಸುವ ಮೂಲಕ ಬಿಜೆಪಿ ಧ್ವಜ ಹಾರಿಸಲು ಸಂಘಟಿತ ಪ್ರಯತ್ನಕ್ಕೆ ಬೆಂಬಲಿಸುವಂತೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದ್ದಾರೆ.
ರಾಯಚೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಘಟನಾ ಅಧ್ಯಕ್ಷರಾಗಿ ಪಕ್ಷದ ಧ್ವಜ ಪಡೆಯುವ ಮೂಲಕ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪ್ರತೀ ಭೂತ್ ಮಟ್ಟದ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿ ಕೇಂದ್ರ ಸರ್ಕಾರದ ಯೋಜನೆಗಳು, ಕಳೆದ ಹತ್ತು ವರ್ಷದಲ್ಲಿ ಆಗಿರುವ ಬದಲಾವಣೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಪಕ್ಷಕ್ಕೆ ಶಕ್ತಿ ತುಂಬಲು ಕಾರ್ಯಕರ್ತರೇ ಕಾರಣ. ಯುದ್ದೋಪಾದಿಯಲ್ಲಿ ಎಲ್ಲರೂ ಸಂಘಟಿತ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು.
ನೀವು ನನಗೆ ಶಕ್ತಿ ತುಂಬಿದರೆ, ನಾನು ನಿಮ್ಮ ಶಕ್ತಿ ಬಲಪಡಿಸಲು ಶ್ರಮಿಸುವದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಕಾಂಗ್ರಸ್ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಉಚಿತ ಅಕ್ಕಿ ನೀಡುವದಾಗಿ ಹೇಳಿ ಇಂದಿಗೂ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಉಚಿತ ವಿದ್ಯುತ್ ನೀಡುವದಾಗಿ ಹೇಳುತ್ತಿದ್ದರೂ ವಿದ್ಯುತ್ ದರ ಹೆಚ್ಚಿಸಲಾಗಿದೆ. ಉಚಿತ ಪ್ರಯಾಣ ನೀಡುತ್ತಿದ್ದು, ಬಸ್‌ಗಳ ಸಂಖ್ಯೆ ಹೆಚ್ಚಿಸಿಲ್ಲ. ಬರ ಘೋಷಣೆಯಾದರೂ ಪರಿಹಾರ ನೀಡದೇ ಕೆಲಸ ಮಾಡಿಲ್ಲ. ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಚಿತ್ರಣವನ್ನೇ ಬದಲಿಸಿದೆ.
ಜನರಿಗೆ ಸರ್ಕಾರದ ಸಾಧನೆ ತಲುಪಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಿದೆ. ಐತಿಹಾಸಿಕವಾಗಿರು ಅಯೋಧ್ಯೆ ರಾಮಮಂದಿರದ ನಿರ್ಮಾಣ ಕನಸು ನನಸುಗೊಳಿಸಲಾಗಿದೆ. ಅಧಿಕಾರ ಆಸೆಗಾಗಿ ನಾನು ಕೆಲಸ ಮಾಡುತ್ತಿಲ್ಲ. ಜನರ ಸೇವೆಗೆ ಶಾಸಕನಾಗಿ ಕೆಲಸ ಮಾಡುತ್ತಿದ್ದನೇ ಈಗ ಪಕ್ಷ ಸಂಘಟಿಸುವ ಜವಬ್ದಾರಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕ ಘಟಕಗಳು, ವಿವಿಧ ಮೋರ್ಚಾಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಧ್ವಜ ಹಾರಿಸಲು ಶ್ರಮಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ದೇಶ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬಲವಾಗಿ ಬೆಳದಿದೆ. ಜಿಲ್ಲೆಯಲ್ಲಿ ಮಾತ್ರ ಅತಿಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಎಲ್ಲಾ ಕ್ಷೇತ್ರಗಳ ಕಾರ್ಯಕರ್ತರು ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಬೇಕಿದೆ. ನೂತನ ಅಧ್ಯಕ್ಷರು ಎಲ್ಲಾ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಿಲ್ಲೆಯಲ್ಲಿ ಬಿಜೆಪಿ ಸ್ಥಾನ ಹೆಚ್ಚಿಸಬೇಕೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸೋತಿರಬಹುದು. ದೇಶದಲ್ಲಿ ಬಿಜೆಪಿ ನಂಬರ್ ಒನ್ ಸ್ಥಾನದಲ್ಲಿದೆ. 1980ರಲ್ಲಿ ಬಿಜೆಪಿ ಬರಲು ಯಾರು ಮುಂದಾಗುತ್ತಿರಲಿಲ್ಲ. ಆದರಿಂದ ಪಕ್ಷ ಹೆಮ್ಮರವಾಗಿ ಬೆಳೆದು ನಿಂತಿದೆ. ಪಕ್ಷ ನಿಷ್ಠೆ ಮತ್ತು ಕಷ್ಟ ಪಟ್ಟು ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಕೇವಲ ಜೈ ಜೈ ಕಾರಗಳಿಗೆ ಸೀಮಿತವಾದರೆ ಸಾಲು ಪಕ್ಷ ಕೆಳ ಮಟ್ಟದಿಂದ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಧೃಡಸಂಕಲ್ಪ ಮಾಡಬೇಕು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಯರ್ಥಿಗಳು ಗೆಲ್ಲುವಿಗೆ ಶ್ರಮಿಸಬೇಕೆಂದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೊದಿ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ದಿ ಪಥವನ್ನುಬದಲಿಸಿದೆ. ರಾಜ್ಯದಲ್ಲಿ ಯುವ ನಾಯಕ ಬಿ.ವ.ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸಲು ಕಾರಣವಾಗಿದೆ. ಜಿಲ್ಲೆಯಲ್ಲಿಯೂ ಶಾಸಕ ಡಾ.ಶಿವರಾಜ ಪಾಟೀಲ್‌ರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಲೋಕಸಭೆ ಮತ್ತು ಜಿಲ್ಲಾ ಮತ್ತು ತಾಲೂಕ ಪಂಚಾಯ್ತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಿದ್ದವಾಗಬೇಕಿದೆ ಎಂದರು.
ವೇದಿಕೆಯಲ್ಲಿ ಹಿಂದಿನ ಅಧ್ಯಕ್ಷ ರಮಾನಂದ ಯಾದವ ಇವರು ಪಕ್ಷದ ಅಧಿಕಾರ ನೀಡಿದರು. ವೇದಿಕೆಯಲ್ಲಿ ಕೆ.ಕರಿಯಪ್ಪ ಸಿಂಧನೂರು, ಗಂಗಾಧರ ನಾಯಕ ಮಾನವಿ, ಪ್ರತಾಪಗೌಡ ಪಾಟೀಲ್ ಮಸ್ಕಿ, ಶರಣಪ್ಪ ಕ್ಯಾದಿಗೇರಾ, ರವೀಂದ್ರ ಜಲ್ದಾರ, ಶಂಕರರೆಡ್ಡಿ ಸೇರಿದಂತೆ ಅನೇಕರಿದ್ದರು. ನೂತನ ಅಧ್ಯಕ್ಷರಿಗೆ ಅನೇಕರು ಸನ್ಮಾನಿಸಿಗೌರವಿಸಿದರು.