ಒಳಮೀಸಲಾತಿ ಜಾರಿಗೊಳಿಸಿ, ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ವರದಿಯಂತೆ ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಮಾ.27 ರಂದು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲು ದಾವಣಗೆರೆ ಜಿಲ್ಲೆಯ ಹರಿಹರ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಸಂಸ) ನಿರ್ಣಯಿಸಿದೆ.
ಹರಿಹರ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, “ಅಂದು ಬೆಳಿಗ್ಗೆ 10ಕ್ಕೆ ಪಕ್ಕೀರಸ್ವಾಮಿ ಮಠದಿಂದ ರಾಣಿ ಚೆನ್ನಮ್ಮ ವೃತ್ತದ ಮುಖಾಂತರ ತಮಟೆ ಭಾರಿಸುತ್ತಾ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜವು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣವಾಗಬೇಕಿದೆ” ಎಂದು ಒತ್ತಾಯಿಸಿದರು.
“ಈ ನಿಟ್ಟಿನಲ್ಲಿ ರಚನೆಯಾಗಿದ್ದ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗವು, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಒಳಪಂಗಡದ ಇತರೆ ಜಾತಿಗಳಿಗೆ ಶೇ.6ರಷ್ಟು ಹಾಗೂ ಉಳಿದ ಸಮುದಾಯದ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಆದರೆ, ಸರ್ಕಾರವು ಆಯೋಗದ ವರದಿಯಂತೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳದೆ, ಫೆ.26 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳೆ ಮೀಸಲಾತಿ ಪ್ರಕಾರವೇ 56,432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಅತ್ಯಂತ ಖಂಡನೀಯ. ಇದು ರಾಜ್ಯದ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಸರ್ಕಾರವು ಬಗೆದ ಮಹಾದ್ರೋಹವಾಗಿದೆ” ಎಂದರು.
“ಆದ್ದರಿಂದ ತಕ್ಷಣವೇ ಈ ನೇಮಕಾತಿ ಆದೇಶವನ್ನು ರದ್ದುಪಡಿಸಿ, ಒಳಮೀಸಲಾತಿ ಸಂಪೂರ್ಣವಾಗಿ ಜಾರಿ ಮಾಡಿದ ನಂತರವೇ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದರು.
ಕದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಭಾನುವಳ್ಳಿ ಚೌಡಪ್ಪ ಸಿ. ಮಾತನಾಡಿ, “ಈ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಭಾಗವಹಿಸುವರು. ಸಮುದಾಯದವರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ?
ಸಭೆಯಲ್ಲಿ ಚೌಡಪ್ಪ ಭಾನುವಳ್ಳಿ, ಕಡ್ಲೆಗೊಂದಿ ತಿಮ್ಮಣ್ಣ, ರಾಜಪ್ಪ, ಸುರೇಶ್ ಡಿ.ಕೆಂಚನಹಳ್ಳಿ, ಸಂಜೀವಪ್ಪ, ಮಂಜಪ್ಪ ಗುಡ್ಡದಹಳ್ಳಿ, ಹನುಮಂತ, ವಾಸನದ ಗದಿಗೆಪ್ಪ ಬಿ., ಹನುಮಂತಪ್ಪ ಬಿ., ರಾಮಪ್ಪ ಹಿಂಡಸಘಟ್ಟ, ಕೆಂಚಪ್ಪ, ನಿಂಗಪ್ಪ ಕೆಂಚನಹಳ್ಳಿ ಇತರರು ಭಾಗವಹಿಸಿದ್ದರು.





