ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಸ್ತೆಮಾಕುಂಟೆ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ 135 ನೇ ಜಯಂತೋತ್ಸವ ಆಚರಿಸಲಾಯಿತು. ಇದೇ ವೇಳೆ ಕರ್ನಾಟಕ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ) (ದಸಂಸ) ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.

ಇದೇ ವೇಳೆ ಮಾತನಾಡಿದ ಮುಖಂಡರು “ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತ್ಯುತ್ಸವದ ಜೊತೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉದ್ಘಾಟನೆ, ಗ್ರಾಮ ಘಟಕದ ರಚನೆ, ಉದ್ಘಾಟನೆ ಉತ್ತಮ ನಿರ್ಧಾರ. ಸಾವಿರಾರು ವರ್ಷಗಳ ಕಾಲ ನಿರಂತರ ಶೋಷಣೆಗೆ ಒಳಗಾದ ದಲಿತ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಡಾ.ಅಂಬೇಡ್ಕರರು ನಿರಂತರ ಪ್ರಯತ್ನ ಮಾಡಿದರು. ಹಲವಾರು ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನ, ಕಾನೂನು ಅಧ್ಯಯನ ಮಾಡಿ ಪದವಿಗಳನ್ನು ಗಳಿಸಿ, ಸಂವಿಧಾನ ರಚನೆಗೆ ಕಾರಣರಾಗಿದ್ದಾರೆ. ಅವರ ಕಾನೂನು ಅರಿವು, ಸಾಮಾಜಿಕ ಕಳಕಳಿಯಿಂದ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ಹುಡುಕಿಕೊಂಡು ಬಂದಿತು” ಎಂದು ಅಭಿಪ್ರಾಯಪಟ್ಟರು.

“ಸಂವಿಧಾನ ರಚನೆಯ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಮೂಲಕ ಶೋಷಿತ ವರ್ಗಗಳ, ಮಹಿಳೆಯರ ವಿಮೋಚನೆಗೆ ಕೊಡುಗೆ ನೀಡಿದರು. ದಲಿತರಿಗೆ ತಮ್ಮ ಹಕ್ಕು, ಸಾಮಾಜಿಕ ನ್ಯಾಯ ನೀಡಿದ ಮಹಾನ್ ಚೇತನ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್” ಎಂದು ಗೌರವ ಸಲ್ಲಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಿಆರ್‌ಆರ್ ಕಾಲೇಜಿನಲ್ಲಿ ದಕ್ಷಿಣ ಉಪಚುನಾವಣೆ ಸುರಕ್ಷಿತ ಮತ ಎಣಿಕೆ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.

ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಸೇರಿದಂತೆ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.





