ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪತ್ರಿಕಾ ದಿನಾಚರಣೆ ಹಾಗೂ 2025-26ನೇ ಸಾಲಿನ ಮಾಧ್ಯಮ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ,ಆಶೀರ್ವಚನ ನೀಡಿ ಮಾತನಾಡಿದ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು “ಸಾಮಾನ್ಯವಾಗಿ ಸಮಾಜದಲ್ಲಿ ವಿಷಯಗಳನ್ನು ತಿಳಿಸಲು ನಾವು ಪತ್ರಕರ್ತರನ್ನು ಕರೆಯುತ್ತೇವೆ. ದಾವಣಗೆರೆ ಪತ್ರಿಕೆಗಳು ಪತ್ರಕರ್ತರ ಇಂತಹ ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಉತ್ತಮ ಕೆಲಸ ಮಾಡುತ್ತಿವೆ. ನೈಜ ಸುದ್ದಿ ಒಂದೇ ಇರುತ್ತದೆ. ಪತ್ರಕರ್ತರು ಹಲವು ಆಯಾಮಗಳಲ್ಲಿ, ಪ್ರಾಧಾನ್ಯತೆ ನೀಡಿ, ಶಬ್ದಗಳ ಮೇಲಿನ ಹಿಡಿತದಿಂದ ನೀಡುವ ಸುದ್ದಿಗಳಿಂದಾಗಿ ಪತ್ರಿಕೆಗಳಿಗೆ ಮಹತ್ವ ಹೆಚ್ಚುತ್ತದೆ. ಪತ್ರಿಕೆಗಳು
ಉತ್ತಮ ಅಂಕಣಗಳ ಬರೆಯುವ ರೂಡಿ ಮೂಲಕ ಸಮಾಜಮುಖಿ, ಜನಪ್ರಿಯ, ಜನಪರವಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

“ಇಂದಿನ ನವಯುಗದಲ್ಲಿ ಪತ್ರಿಕೆಗಳ ಅತಿ ದೊಡ್ಡ ಸವಾಲು ಡಿಜಿಟಲೀಕರಣ, ಪತ್ರಿಕೆ ಕೊಳ್ಳುವ ಆಸಕ್ತಿ ಕಡಿಮೆಯಾಗುತ್ತಿರುವುದು. ಪತ್ರಿಕಾ ರಂಗವು ಇದಕ್ಕೆ ಸಜ್ಜಾಗಬೇಕು. ಪರಿವರ್ತನೆಗೆ ತಯಾರಾಗಬೇಕು. ಸಮಾಜವನ್ನು ಒಳ್ಳೆಯ ದಾರಿಗೆ ತರಲು ಒಳ್ಳೆಯ ಸುದ್ದಿಗಳ ಮೂಲಕ, ಜನರ ಅಭಿರುಚಿ ತಿದ್ದಬಹುದು. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಆರೋಗ್ಯ, ವಸತಿ ಸೇರಿ ಉತ್ತಮ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸಬೇಕು” ಎಂದು ಸಲಹೆ ನೀಡಿದರು.

ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹರಿಹರ ಶಾಸಕ ಬಿಪಿ ಹರೀಶ್ “ಪತ್ರಕರ್ತರದ್ದು ಸಂಕಷ್ಟದ ಜೀವನ. ಜಿಲ್ಲಾ ಮಟ್ಟದ ಮತ್ತು ಗ್ರಾಮೀಣ ಮಟ್ಟದ ಬಹುತೇಕ ಪತ್ರಕರ್ತರು ಜೀವನ ನಿರ್ವಹಣೆಗಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೊಸ ಪೀಳಿಗೆಯ ಇಂದಿನ ಪತ್ರಿಕೋದ್ಯಮದ ಮಧ್ಯೆ ಹಲವು ಸವಾಲುಗಳಿವೆ. ಕ್ಷಣಮಾತ್ರದಲ್ಲಿ ಸುದ್ದಿ ಸಿಗುವ ಸಾಮಾಜಿಕ ಜಾಲತಾಣಗಳ ಅಬ್ಬರದ ಮಧ್ಯೆಯೂ, ಹೆಮ್ಮೆಯ ವಿಷಯವೆಂದರೆ ಪತ್ರಕರ್ತರ ಮೂಲಕ ಸಿಗುವ ವಿಷಯ ಹೆಚ್ಚು ವಿಶ್ವಾಸಾರ್ಹ. ಪತ್ರಿಕೆಗಳನ್ನು ಓದಿದಾಗ ಸಿಗುವ ಸಮಾಧಾನ ಬೇರೆಡೆ ಸಿಗುವುದಿಲ್ಲ. ಅದು ಧ್ಯಾನ ಮಾಡಿದಂತೆ. ಪತ್ರಿಕೆಗಳನ್ನು ಹೆಚ್ಚು ಓದುವ ಮೂಲಕ ಪತ್ರಿಕಾರಂಗವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇಂದಿನ ಪೀಳಿಗೆ ಮತ್ತು ಸಮಾಜದ ಮುಂದಿದೆ” ಎಂದು ಅಭಿಪ್ರಾಯಪಟ್ಟರು.

ಧೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ “ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಸಮಾಜದ ಆಗು ಹೋಗುಗಳಿಗೆ ಕನ್ನಡಿಯಾಗಿರುವ ಪತ್ರಕರ್ತರಿಗೆ ಸದೃಢ ಜೀವನ ಬೇಕು. ಸಂಕಷ್ಟದ ಜೀವನ ನಡೆಸುವ ಪತ್ರಕರ್ತರಿಗೆ ಸಹಾಯ ಸೌಲಭ್ಯಗಳನ್ನು ನೀಡಬೇಕು. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ತೋರುತ್ತಿರುವ ಫಾಸ್ಟ್, ಬ್ರೇಕಿಂಗ್ ನ್ಯೂಸ್ ಹೆಚ್ಚು ಆರೋಗ್ಯಕರವಲ್ಲ. ಸುದ್ದಿ ಮತ್ತು ವಿಷಯಗಳನ್ನು ಪತ್ರಿಕೆಗಳಲ್ಲಿ ಓದಿದಾಗ ವಿಶ್ವಾಸಾರ್ಹ, ನಂಬಿಕೆ ಹಾಗೂ ಸ್ಪಷ್ಟತೆ ಮೂಡುತ್ತದೆ” ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, “ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ನೆಮ್ಮದಿಯ ಜೀವನ ಇಲ್ಲ, ಅಲ್ಪಸ್ವಲ್ಪ ವೇತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಆದರೆ ಪರಿಸ್ಥಿತಿಯನ್ನು ಹೊರಗೆ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ತೋರಿಕೆಯಲ್ಲಿ ಕೂಡ ನಾವು ಉತ್ತಮ ಸೌಲಭ್ಯ ಹೊಂದಿರುವಂತೆ ನಡೆದುಕೊಳ್ಳುತ್ತೇವೆ. ಎಲ್ಲರಿಗೂ ಪ್ರಚಾರಕ್ಕಾಗಿ ಮತ್ತು ಸುದ್ದಿಗಾಗಿ ನಾವುಗಳು ಬೇಕಾಗುತ್ತೇವೆ. ಪತ್ರಕರ್ತರದು ಏಣಿಯ ಸ್ಥಿತಿ. ಪತ್ರಕರ್ತರಿಗೆ ತೀರ ಅಗತ್ಯ ಮತ್ತು ಮೂಲಭೂತ ಸೌಕರ್ಯಗಳಾದ ವಸತಿ, ಆರೋಗ್ಯ, ಇತರೆ ಯೋಜನೆಗಳು ಬೇಕಿದೆ” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಸಾಧನೆಗೈದ ಹಿರಿಯ ಪ್ರಜಾವಾಣಿ ವರದಿಗಾರ ಸಿದ್ದಯ್ಯ ಹಿರೇಮಠ, ವಿಜಯವಾಣಿ ಉಪ ಸಂಪಾದಕ
ಹರ್ಷ ಪುರೋಹಿತ, ನಾಗರಾಜ್, ವರದಿಗಾರ ಮಹಾದೇವ, ವಿಸ್ಮಯವಾಣಿ ಸಂಪಾದಕ
ವಾಸುದೇವ, ಹಿರಿಯ ಪತ್ರಕರ್ತರಾದ ಎಚ್ ಬಿ ಮಂಜುನಾಥ್, ಚಂದ್ರಪ್ಪ, ಸುಭಾಷಿತ ಜೈಮುನಿ , ಆರ್ ಎಸ್ ತಿಪ್ಪೇಸ್ವಾಮಿ, ಹನುಮಂತಪ್ಪ, ಸತೀಶ್, ಉಮೇಶ್ ಕಾಳಪ್ಪ ಅವರಿಗೆ ಜೀವಮಾನದ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವರದಿಗಾರರ ಕೂಟದ 25-26ರ ವಾರ್ಷಿಕ ಮಾಧ್ಯಮ ಪ್ರಶಸ್ತಿಗಳನ್ನು ನಗರಮಿಡಿತ ಸಂಪಾದಕ ವಸಂತ ಕುಮಾರ್, ಟಿವಿ 5 ವರದಿಗಾರ ಅಣ್ಣಪ್ಪ,
ರಿಪಬ್ಲಿಕ್ ವರದಿಗಾರ ವಿಠ್ಠಲ ಹಾಗೂ ಶಿವರಾಜ್, ಮಹೇಶ್ ಕಾಶಿಪುರ, ವಿಜಯ್ ಕುಮಾರ್ ಇವರಿಗೆ ನೀಡಿ ಅಭಿನಂದಿಸಲಾಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತರಾದ ದೂರದರ್ಶನ ವರದಿಗಾರ ತಾರಾನಾಥ್, ವಿಜಯ ಕರ್ನಾಟಕದ ಹಿರಿಯ ವರದಿಗಾರ ಮಂಜುನಾಥ್ ಯಳನಾಡು ಅವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು
ಕಾರ್ಯಕ್ರಮದಲ್ಲಿ ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ್ , ಕಾನಿಪ ಅಧ್ಯಕ್ಷ ಮಂಜುನಾಥ ಏಕಬೋಟಿ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ನಗರವಾಣಿ ಸಂಪಾದಕ ಬಿಎನ್ ಮಲ್ಲೇಶ್, ಪಿಟಿಐ ದೆಹಲಿ ವರದಿಗಾರ್ತಿ ಲಕ್ಷ್ಮೀ, ಎಸ್ ಟಿ ವೀರೇಶ್ ಸೇರಿದಂತೆ ದಾವಣಗೆರೆ ಜಿಲ್ಲಾ, ತಾಲೂಕು ಪತ್ರಕರ್ತರು, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.





