ಪೌರಕಾರ್ಮಿಕ ಕುಟುಂಬದಿಂದ ಆರಂಭವಾದ ಬದುಕಿನ ಪಯಣ ಇದೀಗ ರಾಜ್ಯ ಸಚಿವ ಸಂಪುಟದವರೆಗೆ ತಲುಪಿರುವುದು ಬಸವಂತಪ್ಪ ಅವರ ರಾಜಕೀಯ ಹೋರಾಟ, ಪರಿಶ್ರಮ ಮತ್ತು ಜನಸಂಪರ್ಕದ ಪ್ರತೀಕವಾಗಿದೆ. ಸಚಿವರಾಗಿ ಅವರು ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವ ರೀತಿಯ ಕೊಡುಗೆ ನೀಡಲಿದ್ದಾರೆ ಎಂಬುದರತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.
ಪೌರಕಾರ್ಮಿಕ ದಂಪತಿಯ ಮಗ ತನ್ನ ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳನ್ನು ಮಾಡಿಕೊಂಡು ರಾಜಕೀಯದಲ್ಲಿ ಹಂತಹಂತವಾಗಿ ಬೆಳೆದ ಕೆ ಎಸ್ ಬಸವಂತಪ್ಪ ಅವರು ಇದೀಗ ಕರ್ನಾಟಕ ಸಚಿವ ಸಂಪುಟಕ್ಕೆ ಸೇರುವ ಅವಕಾಶ ಪಡೆದಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಸಚಿವ ಸ್ಥಾನ ದೊರೆತಿರುವುದು ಅವರ ರಾಜಕೀಯ ಬದುಕಿನ ಮಹತ್ವದ ಘಟ್ಟವಾಗಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಬಸವಂತಪ್ಪ ಅವರ ಜೀವನಯಾನ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಆರಂಭವಾಗಿ ರಾಜ್ಯ ರಾಜಕೀಯದ ಉನ್ನತ ಹಂತದವರೆಗೆ ತಲುಪಿರುವ ಉದಾಹರಣೆಯಾಗಿದೆ.
ದಾವಣಗೆರೆಯ ಗಾಂಧಿನಗರದಲ್ಲಿ ಬೆಳೆದ ಬಸವಂತಪ್ಪ ಅವರು ಪೈಲ್ವಾನ್ ಸಂಗಪ್ಪ ಹಾಗೂ ಹನುಮಕ್ಕ ದಂಪತಿಯ ಐದು ಮಕ್ಕಳಲ್ಲಿ ಮೂರನೇ ಪುತ್ರ. ತಂದೆ-ತಾಯಿ ಇಬ್ಬರೂ ಪೌರಕಾರ್ಮಿಕರಾಗಿ ದುಡಿಯುತ್ತಿದ್ದರು. ಕುಟುಂಬದ ಆರ್ಥಿಕ ಸಂಕಷ್ಟದ ನಡುವೆ ಬೆಳೆದ ಬಸವಂತಪ್ಪ ಅವರು ಕೆಲಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದು, ಬಳಿಕ ಸೈಕಲ್ ಸ್ಟ್ಯಾಂಡ್ ಹಾಗೂ ಸಾರ್ವಜನಿಕ ಶೌಚಾಲಯಗಳ ಟೆಂಡರ್‌ಗಳನ್ನು ಪಡೆದು ಜೀವನ ಸಾಗಿಸಿದರು.
ಪಿಯುಸಿ ಶಿಕ್ಷಣ ಪಡೆದ ನಂತರ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾದ ಅವರು, ದಾವಣಗೆರೆ ತಾಲೂಕಿನ ಅನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮಾಯಕೊಂಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಸವಂತಪ್ಪ ಅವರು ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡರು. ಆದರೆ ಆ ಸೋಲಿನಿಂದ ಹಿಂಜರಿಯದೆ ಕ್ಷೇತ್ರದಲ್ಲಿ ನಿರಂತರವಾಗಿ ಜನಸಂಪರ್ಕ ಬೆಳೆಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಸುಮಾರು 34 ಸಾವಿರ ಮತಗಳ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಇದೀಗ ಮೊದಲ ಅವಧಿಯಲ್ಲೇ ಸಚಿವ ಸಂಪುಟಕ್ಕೆ ಸೇರುವ ಅವಕಾಶ ಪಡೆದು ರಾಜಕೀಯವಾಗಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
ಬಸವಂತಪ್ಪ ಅವರು ಮಾಜಿ ಸಚಿವ ಎಚ್. ಆಂಜನೇಯ ಅವರ ಅಳಿಯರಾಗಿದ್ದಾರೆ. ಆಂಜನೇಯ ಅವರ ಸಹೋದರಿ ಹನುಮಕ್ಕ ಅವರ ಪುತ್ರರಾಗಿರುವ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಸಂಘಟನಾ ಶಕ್ತಿ ಹಾಗೂ ಜನಸಂಪರ್ಕದ ಮೂಲಕ ತಮ್ಮದೇ ಆದ ರಾಜಕೀಯ ನೆಲೆ ನಿರ್ಮಿಸಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ? ರಾಯಚೂರು ರಾಜಕೀಯದಲ್ಲಿ ಮತ್ತೆ ಹಿನ್ನಡೆ: ಸಚಿವ ಸ್ಥಾನಕ್ಕೆ ಚೊಂಬು, ಜಿಲ್ಲೆಯ ನಿರೀಕ್ಷೆ ಭಗ್ನ
ಶಾಸಕರಾಗಿದ್ದರೂ ದಾವಣಗೆರೆ ನಗರದ ಎಸ್ ಎಸ್ ಬಡಾವಣಿಯ ಬಿ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಸವಂತಪ್ಪ ಅವರ ಸರಳ ಜೀವನಶೈಲಿ ಗಮನ ಸೆಳೆಯುತ್ತದೆ. ಅವರ ಸಹೋದರ ಕೆ ಎಸ್ ಗೋವಿಂದರಾಜ್ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ.
ಪೌರಕಾರ್ಮಿಕ ಕುಟುಂಬದಿಂದ ಆರಂಭವಾದ ಬದುಕಿನ ಪಯಣ ಇದೀಗ ರಾಜ್ಯ ಸಚಿವ ಸಂಪುಟದವರೆಗೆ ತಲುಪಿರುವುದು ಬಸವಂತಪ್ಪ ಅವರ ರಾಜಕೀಯ ಹೋರಾಟ, ಪರಿಶ್ರಮ ಮತ್ತು ಜನಸಂಪರ್ಕದ ಪ್ರತೀಕವಾಗಿದೆ. ಸಚಿವರಾಗಿ ಅವರು ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವ ರೀತಿಯ ಕೊಡುಗೆ ನೀಡಲಿದ್ದಾರೆ ಎಂಬುದರತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.





