“ಮಠದಲ್ಲಿರುವ ಉಚ್ಛಾಟಿತ ವಚನಾನಂದ ಶ್ರೀಗಳಿಂದ ಇಂದು ಇಡೀ ಪಂಚಮಸಾಲಿ ಸಮಾಜದ ಮಾನ, ಗೌರವ ಬೀದಿಗೆ ಬಿದ್ದಿದ್ದು, ಅವರೊಬ್ಬರ ಸ್ವಾರ್ಥಕ್ಕೆ ಸಮಾಜ ತಲೆತಗ್ಗಿಸುವಂತಾಗಿದೆ. ಸರ್ಕಾರಕ್ಕೆ ಪ್ರತಿ ವರ್ಷ ನನ್ನ ಉದ್ಯಮದಿಂದ 30 ಕೋಟಿ ರೂ. ತೆರಿಗೆ ಪಾವತಿಸುವ ನನಗೆ ಮಠದ ಹಣ ಕಬಳಿಸುವ ಯಾವ ದರ್ದು ಇಲ್ಲ. ಆದರೆ, ಕಳೆದ ಎರಡೂವರೆ ದಶಕಗಳಿಂಸೇರಿದಂತೆ ಜೀದ ಸಮಾಜದ, ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನನ್ನನ್ನು ವಚನಾನಂದ ಶ್ರೀಗಳು ಗಂಟುಗಳ್ಳ ಎಂದು ಕರೆದದ್ದು ಬೇಸರ ತರಿಸಿದೆ” ಎಂದು ದಾವಣಗೆರೆ ಜಿಲ್ಲೆ ಪಂಚಮಸಾಲಿ ಪೀಠದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ ಸಿ ಉಮಾಪತಿ ಅಸಮಾಧಾನ ವ್ಯಕ್ತಪಡಿಸಿದರು.

ಹರಿಹರದ ಪಂಚಮಸಾಲಿ ಹರಪೀಠದಲ್ಲಿ ವಚನಾನಂದ ಶ್ರೀಗಳ ಪರವಾದ ಗುಂಪು ಕೇಳಿದ್ದ ಲೆಕ್ಕಕೊಡಿ ಚಳುವಳಿಗೆ ಪ್ರತಿಯಾಗಿ ಟ್ರಸ್ಟಿಗಳು ಕರೆದಿದ್ದ ಲೆಕ್ಕಪತ್ರ ನೀಡುವ ಸಮಾವೇಶ ವಿರೋಧ, ಕೂಗಾಟ, ಹೈಡ್ರಾಮಾ ಗೊಂದಲದ ನಡುವೆಯೂ ಸಮಾಜದ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಬರೋಬ್ಬರಿ ಮೂರು ಗಂಟೆಗಳ ಕಾಲ, 2008ರಿಂದ 2026ರ ವರೆಗೆ ಮಠಕ್ಕೆ ಬಂದಿರುವ ಸರ್ಕಾರ, ದಾನಿಗಳು, ಸಮಾಜ ಬಾಂಧವರು ನೀಡಿರುವ ಹಣದ ಲೆಕ್ಕ ಒಪ್ಪಿಸಿದರು.
ಸೋಮವಾರ, ಎಪ್ರಿಲ್ 27ರಂದು ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಲೆಕ್ಕ ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಬಿ ಸಿ ಉಮಾಪತಿ, “18 ವರ್ಷಗಳಲ್ಲಿ ಮಠಕ್ಕೆ 27 ಕೋಟಿ 61 ಲಕ್ಷ 57 ಸಾವಿರದ 518 ರೂ.ಗಳ ಬಂದಿದ್ದು, ಸರ್ಕಾರದಿಂದ ಬಂದಿರುವ 12.70 ಕೋಟಿ ರೂ, ಮರಳು ಮಾರಾಟ ಮಾಡಿದ 10 ಲಕ್ಷ ರೂ., ಸಂಡೂರು ನಾಗನಗೌಡ 2 ಕೋಟಿ ರೂ., ಬಸವರಾಜ ಬೊಮ್ಮಾಯಿ 15 ಲಕ್ಷ, ದೇವಸ್ಥಾನ ನಿರ್ಮಾಣಕ್ಕೆ ಶಾಮನೂರು ಶಿವಶಂಕರಪ್ಪ 1 ಕೋಟಿ ರೂ. ನೀಡಿರುವುದು ಸೇರಿದಂತೆ ಒಟ್ಟು 27 ಕೋಟಿ ರೂ. ಸೇರಿದಂತೆ ರಾಜ್ಯಾದ್ಯಂತ ದಾನಿಗಳು ನೀಡಿದ್ದಾರೆ” ಅಷ್ಟೂ ದಾನಿಗಳ ಹೆಸರನ್ನು ಉಲ್ಲೇಖಸಿ, ಅವರು ನೀಡಿದ ಹಣವನ್ನು ವಿವರಿಸಿದರು.

“ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಅಷ್ಟೂ ಹಣ ಮಠದ ಆವರಣದಲ್ಲಿ ದೇವಸ್ಥಾನ, ಗುರುಧ್ಯಾನ ಮಂದಿರ, ದಾಸೋಹ ಭವನ, ನಿರ್ಮಾಣ, ಮಠದ ಸ್ಥಳ ಮಣ್ಣು ತುಂಬಿ ಸಮತಟ್ಟು ಮಾಡಲು, ಹರ ಜಾತ್ರೆ, ಶ್ರೀಗಳ ಪೀಠಾರೋಹಣ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಅನ್ನ ದಾಸೋಹ ಸೇರಿದಂತೆ ವಿವಿಧ ಧರ್ಮ ಕಾರ್ಯಗಳಿಗೆ ವ್ಯಯಿಸಲಾಗಿದೆ. ಅದರಲ್ಲಿ ಉಳಿದ 1.68 ಕೋಟಿ ರೂ. ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗಿದೆ” ಎಂದು ಖರ್ಚು ಮಾಡಿದ ಪ್ರತಿಯೊಂದರ ಲೆಕ್ಕವನ್ನೂ ವಿವರಿಸಿ ಸಮಾಜ ಬಾಂಧವರಿಗೆ ಮನದಟ್ಟು ಮಾಡಿಸಿದರು.

ಕರೆ ಮಾಡಿದ ಕೇಂದ್ರ ಸಚಿವ;
ಕಾರ್ಯಕ್ರಮದ ವೇದಿಕೆಯಲ್ಲಿ ಲೆಕ್ಕ ಒಪ್ಪಿಸುವ ವೇಳೆಯಲ್ಲೇ ಬಿ.ಸಿ. ಉಮಾಪತಿ ಅವರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ದೂರವಾಣಿ ಕರೆ ಮಾಡಿದ್ದರು. ಮೈಕ್ ಎದುರೇ ಮಾತನಾಡಿದ ಉಮಾಪತಿ ಅವರು, “ನಮ್ಮವರೇ ಕೆಲವರು ನಮ್ಮ ಮಾನ ಮರ್ಯಾದೆ ತೆಗೆದೆ ಹೋಗುವುದು ಎಂದು ಛಾಲೆಂಜ್ ಮಾಡಿದ್ದಾರಂತೆ. ಹೀಗಿದ್ದಾಗ ನಾವು ಸುಮ್ಮನಿರುವುದು ಹೇಗೆ? ನೀವೇ ಹೇಳಿ? ನಾವು ಸರಿ ದಾರಿಯಲ್ಲಿರುವುದು ತಪ್ಪೇ?” ಎಂದು ವಿ. ಸೋಮಣ್ಣಗೆ ಪ್ರಶ್ನಿಸಿ, ಕಾರ್ಯಕ್ರಮ ಮುಗಿದ ಮೇಲೆ ಕರೆ ಮಾಡುವೆ ಎಂದು ಉಮಾಪತಿಯವರು ಕರೆ ಸ್ಥಗಿತಗೊಳಿಸಿದರು.

“4.28 ಎಕರೆ ಮಠದ ಜಾಗ, ದಾನಿಗಳು ನೀಡಿದ 174 ಕೆಜಿ ಬೆಳ್ಳಿ, ಹಿರೇಕೆರೂರಿನಲ್ಲಿ 1 ಸೈಟ್, ಬಳ್ಳಾರಿಯಲ್ಲಿ 1 ಎಕರೆ 18 ಗುಂಟೆ, ಶಿಗ್ಗಾಂವಿಯಲ್ಲಿ 2 ಎಕರೆ, ಹರಪಹಳ್ಳಿಯಲ್ಲಿ 2 ಎಕರೆ, ಕುಷ್ಟಗಿಯಲ್ಲಿ 1 ಎಕರೆ 8 ಗುಂಟೆ, ಕೂಡ್ಲಗಿಯಲ್ಲಿ 1 ಎಕರೆ, 1 ಟಾಟಾ ಸಫಾರಿ ವಾಹನ, 1 ಬೊಲೆರೋ ವಾಹನಗಳು ಮಠದ ಸ್ವತ್ತು” ಎಂದು ವಿವರಿಸಿದರು
ಲೆಕ್ಕ ಕೊಡುವ ವೇದಿಕೆ ಕಾರ್ಯಕ್ರಮ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಠದೊಳಗಿದ್ದ ವಚನಾನಂದ ಶ್ರೀಗಳು ಮಠದಿಂದ ಹೊರನಡೆದರು. ಇದನ್ನು ಕಂಡ ಭಕ್ತ ಸಮೂಹ ವೇದಿಕೆ ಮುಂಭಾಗದಿಂದ ಎದ್ದು ಶ್ರೀಗಳ ಹಿಂದೆ ನಡೆದು ಕೆಲ ಕಾಲ ಗೊಂದಲವಾಯಿತು.ತದನಂತರ ಅರ್ಧ ಗಂಟೆಯ ನಂತರ ಮತ್ತೆ ವೇದಿಕೆಯತ್ತ ಆಗಮಿಸಿದ ಸ್ವಾಮೀಜಿ ಪರ ಭಕ್ತರು ಟ್ರಸ್ಟಿಗಳ ವಿರುದ್ಧ ಧಿಕ್ಕಾರ ಕೂಗಿ, ಕೃಷ್ಣನ ಲೆಕ್ಕ ಬೇಡ ರಾಮನ ಲೆಕ್ಕ ಕೊಡಿ, ನಿಮ್ಮ ಲೆಕ್ಕಕ್ಕೆ ನಮ್ಮವಿರೋಧವಿದೆ ಎಂದು ವೇದಿಕೆ ಬಲಭಾಗದಲ್ಲಿ ನಿಂತು ಹರಹರ ಮಹದೇವ್, ಜೈ ಪಂಚಮಸಾಲಿ.. ಘೋಷಣೆ ಕೂಗತೊಡಗಿದರು. ಈ ವೇಳೆ ಭಾಷಣ ಮಾಡುತ್ತಿದ್ದ ಸಮಾಜದ ಮುಖಂಡ ಎಚ್.ಎಸ್. ನಾಗರಾಜ್ ಸಿಡಿಮಿಡಿಗೊಂಡು “ನಿಮ್ಮ ಬೆದರಿಕೆಗೆ ಬಗ್ಗುವವರು ನಾವಲ್ಲ. ನೀವು ಲೆಕ್ಕ ಕೇಳಿದ್ದೀರಿ.. ನಾವು ಇಂದು ಕೊಡುತ್ತಿದ್ದೇವೆ. ಬಂದು ಕೇಳಿ” ಎಂದರು.

ಆದರೂ, ಸ್ವಾಮೀಜಿ ಬೆಂಬಲಿಗರು ಧಿಕ್ಕಾರ ಕೂಗಿದಾಗ ಆಕ್ರೋಶಗೊಂಡ ಎಚ್.ಎಸ್. ನಾಗರಾಜ್ ಬನ್ನಿ ನಾವಾ ನೀವಾ ನೋಡೇಬಿಡೋಣ ಎಂದು ವೇದಿಕೆಯಿಂದಲೇ ಇಳಿದು ಅವರೆಡೆಗೆ ಸಾಗಿದಾಗ ಕೆಲಕಾಲ ತೀವ್ರ ಗೊಂದಲ ಉಂಟಾಗಿ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಧ್ಯಸ್ಥಿಕೆಯಿಂದ ಮತ್ತೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು.
ಮಠದ ಆವರಣದಲ್ಲಿರುವ ಡಾ.ಮಹಂತ ಶ್ರೀಗಳ ಗದ್ದುಗೆ ದರ್ಶನಕ್ಕೆ ತೆರಳಿದ ವೇಳೆ ಮನಗುಳಿಯ ಸಂಗನಬಸವ ಶ್ರೀಗಳ ಮೇಲೆ ವಚನಾನಂದರ ನೀರಿನ ಬಾಟಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸದ ಸಂಗನಬಸವ ಶ್ರೀ ದರ್ಶನ ಪಡೆದು ತೆರಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠದ ಸಂಘರ್ಷ: ಸಂಘದಿಂದ ಮೂವರು ಟ್ರಸ್ಟಿಗಳ ಉಚ್ಛಾಟನೆ
ಮನಗುಳಿಯ ಶ್ರೀ ಸಂಗನಬಸವ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಟ್ರಸ್ಟಿ ಕಳಕನಗೌಡ ಪಾಟೀಲ್, ಬಿ.ಡಿ. ಶಿರೂರು, ಚಂದ್ರಶೇಖರ್ ಪೂಜಾರ್, ಸಮಾಜದ ಮುಖಂಡರಾದ ಸಿರಿಗೆರೆ ನಾಗನಗೌಡರು, ಎಚ್.ಎಸ್. ನಾಗರಾಜ್, ಸಿ.ಆರ್. ಬಳ್ಳಾರಿ, ಎಂ.ಬಿ. ಪಾಟೀಲ್, ವಸಂತ ಹುಲ್ಲತ್ತಿ, ತಿಪ್ಪಣ್ಣ, ಕಿಚಡಿ ಕೊಟ್ರೇಶ್ ಸೇರಿದಂತೆ ನೂರಾರು ಸಮಾಜ ಬಾಂಧವರು ಹಾಜರಿದ್ದರು.






