ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮೀಣ ವಿಭಾಗದ ಡಿಪೊ ಬಳಿಯ ಮರಕ್ಕೆ ಸಂಸ್ಥೆಯ ಬಸ್ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ಮಂಜುನಾಥ ಎನ್. ರಾಜೂರ (38) ಎಂದು ಗುರುತಿಸಲಾಗಿದೆ. ಅವರು ಕಳೆದ 11 ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೆ.25ರಂದು ರಾತ್ರಿ ಗೋಕುಲ ರಸ್ತೆಯಲ್ಲಿರುವ ಗ್ರಾಮೀಣ ವಿಭಾಗದ ಡಿಪೊದ ವಿಶ್ರಾಂತಿ ಗೃಹದಲ್ಲಿ ಮಂಜುನಾಥ ಅವರು ತಂಗಿದ್ದರು. ಬಳಿಕ ಡಿಪೊ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





