ಜಿಲ್ಲೆಯ ಕೆ.ಬಿ. ಹೊಸಹಳ್ಳಿ ಬಂಡೆಯಲ್ಲಿ ಯಲಹಂಕ ಮೂಲದ ಲಾರಿ ಚಾಲಕ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಬೆಟ್ಟಹೊಸಪುರದ ಆರ್.ಎಸ್. ರಾಕ್ ಸ್ಯಾಂಡ್‌ನಲ್ಲಿ ಟಿಪ್ಪರ್ ಚಾಲಕ ಸುಬೇದಾರ್ ಬ್ಯಾನರ್ಜಿ ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಸಾವು ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಲ್ಲು ಗಣಿಗಾರಿಕೆ ಹಾಗೂ ಮರಳು, ಮಣ್ಣು, ಸಾಗಣೆ ಚಟುವಟಿಕೆಗಳ ನಡುವೆ ಕಾರ್ಮಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯ ಕುರಿತು ರೈತ ಸಂಘದ ಮುಖಂಡ ರಾಮುಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಗಣಿ ಪ್ರದೇಶಗಳಲ್ಲಿ ಕಾರ್ಮಿಕರ ಸಾವುಗಳು ಮರುಕಳಿಸುತ್ತಿದ್ದು, ಮೃತ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ರೈತ ಸಂಘ ಆಗ್ರಹಿಸಿದೆ.
ಬೆಟ್ಟ ಹೊಸಪುರದ ಆರ್‌ಎಸ್ ರಾಕ್ ಸ್ಯಾಂಡ್ ಕ್ರಷರ್‌ನಲ್ಲಿ ಪಶ್ಚಿಮ ಬಂಗಾಳ ಮೂಲದ ಟಿಪ್ಪರ್ ಚಾಲಕ ಸುಬೇದಾರ್ ಬ್ಯಾನರ್ಜಿ ಮೃತಪಟ್ಟ ಘಟನೆ ಹಾಗೂ ಭಾನುವಾರ ಯಲಹಂಕ–ಬಾಗಲೂರು ಮೂಲದ ಟಿಪ್ಪರ್ ಚಾಲಕ ರಮೇಶ್ ಮೃತಪಟ್ಟ ಘಟನೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಎರಡೂ ಸಾವುಗಳು ಭಾನುವಾರವೇ ಸಂಭವಿಸಿರುವುದು ಗಮನ ಸೆಳೆದಿದ್ದು, ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಯಾವ ಕ್ರಮ ಕೈಗೊಂಡಿವೆ ಎಂಬ ಪ್ರಶ್ನೆಯನ್ನು ರೈತ ಸಂಘ ಮುಂದಿಟ್ಟಿದೆ.
ಕಾರ್ಮಿಕರ ಸಾವಿಗೆ ಹೊಣೆ ಯಾರು?
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಮಿಕರ ಸುರಕ್ಷತೆ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿನ ನಿಯಮಗಳ ಪಾಲನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಸಾವಿಗೆ ಕಾರಣವೇನು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಒತ್ತಾಯಿಸಿದರು.
ಸುಬೇದಾರ್ ಬ್ಯಾನರ್ಜಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ
ಬೆಟ್ಟ ಹೊಸಪುರದ ಆರ್‌ಎಸ್ ರಾಕ್ ಸ್ಯಾಂಡ್ ಕ್ರಷರ್‌ನಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮೂಲದ ಟಿಪ್ಪರ್ ಚಾಲಕ ಸುಬೇದಾರ್ ಬ್ಯಾನರ್ಜಿ ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡುವಂತೆ ಆದೇಶವಾಗಿದ್ದು, ಮೊದಲ ಕಂತಾಗಿ ₹12 ಲಕ್ಷ ಅವರ ಪತ್ನಿಯ ಹೆಸರಿಗೆ ಜಮೆಯಾಗಿರುವುದಾಗಿ ರೈತ ಸಂಘ ತಿಳಿಸಿದೆ. ಉಳಿದ ₹13 ಲಕ್ಷ ಪರಿಹಾರವನ್ನು ಕೂಡಲೇ ಪಾವತಿಸಬೇಕು. ಬಾಕಿ ಹಣ ಪಾವತಿಯಾಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಸಂಘ ಎಚ್ಚರಿಸಿದೆ.
ರಮೇಶ್ ಕುಟುಂಬಕ್ಕೆ ₹50 ಲಕ್ಷ ಪರಿಹಾರಕ್ಕೆ ಆಗ್ರಹ
ಭಾನುವಾರ ಮೃತಪಟ್ಟ ಯಲಹಂಕ–ಬಾಗಲೂರು ಮೂಲದ ಟಿಪ್ಪರ್ ಚಾಲಕ ರಮೇಶ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ರಮೇಶ್ ಅವರು ಕ್ರಷರ್, ಕ್ವಾರಿಯಲ್ಲಿ ಅಥವಾ ಬಂಡೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ದೊರಕಿಸಿಕೊಡಬೇಕು. ಮುಂದೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
ಕಾರ್ಮಿಕರಿಗೆ ವಿಮಾ ಪಾಲಿಸಿ ಕಡ್ಡಾಯಗೊಳಿಸಲು ಒತ್ತಾಯ
ಕಾರ್ಮಿಕರ ಜೀವಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಮಿಕನಿಗೂ ವಿಮಾ ಪಾಲಿಸಿ ನೀಡಬೇಕು. ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತ ಸಂಘ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ..?ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್
ಹೆಣದ ಮೇಲೆ ವ್ಯಾಪಾರ ಬೇಡವೇ ಬೇಡ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಬೇಕೇ ಬೇಕು. ಕಾರ್ಮಿಕರಿಗೆ ವಿಮಾ ಪಾಲಿಸಿ ನೀಡಲೇಬೇಕು. ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ” ಎಂದು ರೈತ ಸಂಘ ಕರೆ ನೀಡಿದೆ.




