ಗದಗ | ಜಾಗ, ಮನಿ, ಕರೆಂಟ್, ನೀರು ಕೊಡ್ತೀವಿ ಓಟಾಕಿ ಅಂದ್ರು; ಈಗ ಏನನ್ನೂ ಕೊಡ್ಲಿಲ್ರಿ; ಅಲೆಮಾರಿ ಸಮುದಾಯಗಳ ಅಳಲು

Date:

ಅಲ್ಲಿಂದ ಇಲ್ಲಿಗೆ ಒಕ್ಕಲೆಬ್ಬಿಸಿದ್ರಿ. ಇಲ್ಲಿ ಕತ್ತಲ್ದಾಗ ಮಕ್ಳು ಮರಿ ಕಟ್ಗೊಂಡು ಬದುಕ್ತಿದ್ದೀವ್ರಿ, ರಾತ್ರಿಹೊತ್ತು ಬೆಳಕಿಲ್ರಿ, ಕುಡಿಯಾಕ ನೀರಿಲ್ರಿ, ನಮಗ ಯಾರಂದ್ರ ಯಾರ ಆಸರ ಇಲ್ಲರಿ. ಇಲ್ಲಿಂದ ಕೀಳ್ ಅಂದ್ರ ಮತ್ತೇಲ್ಲಿಗೆ ಹೋಗ್ಬೇಕನ್ನೋದು ಗೊತ್ತಿಲ್ಲರಿ. ಒಂದಿನ ಅಧಿಕಾರಿಗಳು ಬಂದು ನಿಮಗ ಜಾಗ ಮನಿ ಕೊಡ್ತಿವಿ ಬನ್ನಿ ಅಂದ್ರು. ಖುಷಿಯಿಂದ ಓಡೋಡಿ ಹ್ವಾದ್ರ ದುಡ್ ಕೊಡ್ರಿ ಕೊಡ್ತೀವಿ ಅಂದ್ರ, ದುಡ್ಡಿದ್ದೋರು ಕೊಟ್ರು, ನಾವ್ ಎಲ್ಲಿಂದ ದುಡ್ ತರ್ಬೇಕ್ರಿ, ನಮ್ಮ ಹೊಟ್ಟಿ, ಮಕ್ಳ ಹೊಟ್ಟಿ ತುಂಬಿಸ್ಕೊಳ್ಳದ ಆಗ್ವಲ್ಲದ್ರಿ ನಾವ್ ಎಲ್ಲಿಂದ ರೊಕ್ಕ ಕೊಡಾಕಾಗುತ್ತ ಹೇಳ್ರಿ ಎಂದು ಯಮನವ್ವ ತಮ್ಮ ನೋವು ತೋಡಿಕೊಂಡರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ರೋಣಕ್ಕೆ ಹೋಗುವ ದಾರಿಯಲ್ಲಿ, ಗುಡ್ಡಕ್ಕೆ ಹಚ್ಚಿಕೊಂಡು ಇರುವ ಖಾಸಗಿ ಜಾಗದಲ್ಲಿ ಅಲೆಮಾರಿ ಸಮುದಾಯಗಳು ಸುಮಾರು ಇಪ್ಪೈತ್ತೈದಕ್ಕೂ ಹೆಚ್ಚು ಕುಡಿಸಲುಗಳನ್ನು ಹಾಕಿಕೊಂಡು ನೂರಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಜನರು ಇಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಚನ್ನದಾಸರು, ದುರುಗು ಮುರುಗಿ, ಕಾಡ ಸಿದ್ದರು, ಬುಡಗ ಜಂಗಮ ಅಲೆಮಾರಿ ಸಮುದಾಯಗಳ ಸುಮಾರು ಇಪ್ಪತ್ತು ವರ್ಗಗಳಿಂದ ಅಲ್ಲಿ ಇಲ್ಲಿ ಬದುಕುತ್ತಾ, ಇಲ್ಲಿ ಬಂದು ನೆಲೆಯೂರಿದ್ದೇವೆಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಅಲ್ಲಿಂದ ಒಕ್ಕಲೆಬ್ಬಿಸುವ ಭಯದಲ್ಲಿಯೇ ನಿತ್ಯ ಬದುಕುತ್ತಿದ್ದಾರೆ. ಇವರಿಗೆ ಶಾಶ್ವತ ಮನೆ ಇಲ್ಲ ಜಾಗ ಇಲ್ಲ‌. ಯಾವುದೇ ಮೂಲ ಸೌಕರ್ಯಗಳಿಲ್ಲದೇ ನಿತ್ಯವೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಅಲೆಮಾರಿ ಸಮುದಾಯಗಳಿಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ದೊರೆಯದೆ ವಂಚಿತರಾಗಿದ್ದಾರೆ.

ಇಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯಗಳು, ಚನ್ನದಾಸರು, ಊರೂರಿಗೆ ಅಲೆಯುತ್ತ ಭಕ್ತಿ ಗೀತೆಗಳನ್ನು ಹಾಡಿ ಜನರು ಕೊಟ್ಟಷ್ಟು ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ದುರುಗುಮುರುಗಿ, ಕಾಡ ಸಿದ್ದರು ಭಿಕ್ಷೆ ಬೇಡಿಕೊಂಡು ಬದುಕಿದರೆ, ಬುಡುಗ ಜಂಗಮ ದಾಸರು ಮಹಾಭಾರತ, ರಾಮ ರಾವಣರ ಯುದ್ದ, ಭೀಮಾಂಜನೆಯ ಯುದ್ದ, ಬೇಡರ ಕಣ್ಣಯ್ಯನ ಹೀಗೆ ಪೌರಾಣಿಕ ವೇಷಗಳನ್ನು ಹಾಕಿಕೊಂಡು ಊರೂರು, ಬೀದಿ ಬೀದಿ ಸುತ್ತಿ ಜನರಿಗೆ ಮನರಂಜನೆ ನೀಡುತ್ತಾರೆ. ಈ ಸಮುದಾಯಗಳು ಕಲೆಯನ್ನು ಜನರ ಮುಂದೆ ಪ್ರದರ್ಶಿಸಿ ಮನರಂಜಿಸಿ, ಜನರು ಕೊಟ್ಟಷ್ಟು ಹಣದಲ್ಲಿ ಜೀವನ ಸಾಗಿಸುತ್ತಾರೆ. ಇದರ ಜೊತೆಗೆ ಕೀಲಿಕೈ, ಛತ್ರಿ, ಸ್ಟೆಷನರಿ ಸಾಮಾನುಗಳನ್ನು ಮಾರಿ ಬದುಕುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಲೆಮಾರಿ ಸಮುದಾಯಗಳು ಸುಮಾರು ಇಪ್ಪೈದು ವರ್ಷಗಳಿಂದ ಗಜೇಂದ್ರಗಡ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಎಪಿಎಂಸಿ ಜಾಗದಲ್ಲಿ ವಾಸವಿದ್ದರು. ಆಗ ಎಲೆಕ್ಷನ್ ಬಂದಾಗ ಈ ಜಾಗದಲ್ಲಿ ಮಾಜಿ ಶಾಸಕರ ಕಾರ್ಯಕ್ರಮ ಆಗಬೇಕಿತ್ತು. ಆಗ ಅವರಿಗೆ ಮನಿ ಕೊ‌ಡ್ತೀವಿ, ಜಾಗ ಕೊಡ್ತೀವಿ ಅಂತ ಹೇಳಿದ್ರು, ಇಲ್ಲಿಯೇ ಅವರಿಗೆ ಜಾಗ ಕೊಡಬೇಕಿತ್ತು. ಆಗ ಪೋಲಿಸರಿಂದ ಹೆದರಿಸಿದರು. ಐವತ್ತು ಅರವತ್ತು ಕುಟುಂಬಗಳು ಹೆದರಿ ಎಲ್ಲೆಲ್ಲೋ ಹೋದವು. ಈಗ ಮೂವತ್ತು ಕುಟುಂಬಗಳು ಮಾತ್ರ ಇಲ್ಲಿ ವಾಸಿಸುತ್ತಾರೆ.

ಕುಡಿಯುವ ನೀರಿನ ಸಮಸ್ಯೆ
ಗಜೇಂದ್ರಗಡ ಪಟ್ಟಣದಲ್ಲಿ ಪುರಸಭೆ ಇದ್ದು, ಈ ಅಲೆಮಾರಿ ಸಮುದಾಯಗಳಿಗೆ ಕುಡಿಯುವ ನೀರು ಒದಗಿಸುತ್ತಿಲ್ಲ. ಈ ಸಮುದಾಯದ ಜನರು ಕುಡಿಯುವ ನೀರಿಗಾಗಿ ನಿತ್ಯವು ಅಲೆದಾಡುತ್ತಿದ್ದಾರೆ. ಮೂರು ನಾಲ್ಕು ಕೀಲೋಮೀಟರ್ ನಡೆದುಕೊಂಡು ಹೋಗಿ, ಒತ್ತುವ ಗಾಡಿಯಲ್ಲಿ ನೀರು ತರುತ್ತಾರೆ. ನೀರಿಲ್ಲದಾಗ ಮೂರು ದಿನಕ್ಕೊ ನಾಲ್ಕು ದಿನಕ್ಕೊ ಒಮ್ಮೊಮ್ಮೆ ಎಲ್ಲರೂ ದುಡ್ಡು ಹಾಕಿ ನೀರಿನ ಕುಡಿಯಲು ಟ್ಯಾಂಕ್ ನೀರು ತರಿಸಿಕೊಳ್ಳುತ್ತಾರೆ. ಗಜೇಂದ್ರಗಡದ ಪುರಸಭೆಯಯಿಂದ ಯಾವುದೇ ರೀತಿಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಈ ಅಲೆಮಾರಿ ಸಮುದಾಯಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ.

ಕತ್ತಲಿನಲ್ಲಿಯೇ ಬದುಕು
ಇಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳಿವೆ. ಈ ಗುಡಿಸಲುಗಳಿಗೆ ಯಾವುದೇ ಕರೆಂಟಿನ ವ್ಯವಸ್ಥೆ ಇರುವುದಿಲ್ಲ‌. ಇಲ್ಲಿ ವಾಸಿಸುವ ಜನರು ಕತ್ತಲಿನಲ್ಲಿಯೇ ಮಕ್ಕಳು ಮರಿ ಕಟ್ಟಿಕೊಂಡು ಹಾವು ಹುಳ ಹುಪ್ಪಡಿ ಭಯದ ನಡುವೆಯೇ ನಿತ್ಯ ಕತ್ತಲಲ್ಲಿಯೇ ಬದುಕುತ್ತಿದ್ದಾರೆ.

ಅಲೆಮಾರಿ ಸಮುದಾಯದ ಮಕ್ಕಳು ಶಿಕ್ಷಣ ವಂಚಿತರು
ಈ ಅಲೆಮಾರಿ ಸಮುದಾಯದ ಮಕ್ಕಳು ಶಿಕ್ಷದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಯ ಮಕ್ಕಳು ಐದರಿಂದ ಆರನೇ ತರಗತಿವರೆಗೆ ಕಲಿತಿರುತ್ತಾರೆ. ಅವರ ಶಿಕ್ಷಣವನ್ನು ಅಲ್ಲಿಗೆ ಬಿಡಿಸಿ ದುಡಿಯುವುದಕ್ಕೆ ಕಳಿಸುತ್ತಾರೆ. ಹತ್ತರಿಂದ ಹನ್ನೆರನೇ ತರಗತಿ ಪದವಿ ಕಲಿಯುತ್ತಿರುವವರು ಎಲ್ಲೊ ಒಬ್ಬರು. ಉಳಿದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಮೌಢ್ಯದಿಂದ ಬದುಕುತ್ತಿದ್ದಾರೆ.

ಬುಡಗ ಜಂಗಮ ಸಮುದಾಯದ ಲಕ್ಣ್ಮಣ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಸುಮಾರು ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಇಲ್ಲಿಯೇ ಓಟರ್ ಐಡಿ ಕಾರ್ಡ್ ರೇಷನ್ ಕಾರ್ಡ್‌ ಇದ್ದರೂ ನಮಗೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ನಿತ್ಯವೂ ನೀರಿನ ಸಮಸ್ಯೆ, ಕರೆಂಟ್ ಸಮಸ್ಯೆ ಇದೆ. ನಮಗೆ ಜಾಗ ಇಲ್ಲ, ಮನೆಯಿಲ್ಲ” ಎಂದು ಹೇಳಿದರು.

ಹೋರಾಟಗಾರ ಬಾಲು ರಾಠೋಡ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇಲ್ಲಿಯ ಅಲೆಮಾರಿ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರನ್ನು ರಾಜಕೀಯಕ್ಕೆ ಬಳಸಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಇವರಿಗೆ ಯಾವುದೇ ರೀತಿಯ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕ ಸಂಘಟನೆಯ ಮೂಲಕ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೆವು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಅವರಿಗೆ ವಾಸಿಸಲು ಜಾಗ, ಮನೆ ಮೂಲ ಸೌಕರ್ಯಗಳನ್ನು ಒದಗಿಸಬೇಕು” ಎಂದರು.

ಗಜೇಂದ್ರಗಡ ತಾಲೂಕು ತಹಶೀಲ್ದಾರ್ ಆರ್ ಕುಲಕರ್ಣಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಚೀಫ್ ಆಫಿಸರ ಮೂಲಕ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವೆ‌” ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಲವಗೊಪ್ಪ ಗ್ರಾಮದಲ್ಲಿ ಏಕಾಏಕಿ ಸರ್ವೆ; ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಅಲೆಮಾರಿ ಸಮುದಾಯಗಳನ್ನು ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಢರಾಗುವಂತೆ ಮಾಡಲು ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅಲೆಮಾರಿ‌, ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಇದೆ. ಈ ಮಂಡಳಿ ಅಲೆಮಾರಿ ಸಮುದಾಯಗಳ ಜನರನ್ನು ಸದೃಢರನ್ನಾಗಿ ಮಾಡಬೇಕು. ಆದರೆ ಇಲ್ಲಿಯ ಅಧಿಕಾರಿಗಳು ಯಾವುದೇ ರೀತಿಯ ಅಲೆಮಾರಿ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲದೇ, ಅವರಿಗೆ ಯಾವುದೇ ರೀತಿಯಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಹೆಸರಿಗಷ್ಟೆ ಮಂಡಳಿಯಾಗಿದೆ.

ಸಮಾಜದಿಂದ ದೂರವಿರುವ ಇಂತಹ ಅಲೆಮಾರಿ ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುನ್ನಲೆಗೆ ತಂದು ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವಂತೆ ಸರ್ಕಾರ ಮುಂದಾಗಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ರಾಮೇಶ್ವರಂ ಕೆಫೆ ಸ್ಪೋಟ; ಎಲ್ಲ ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು

ಶುಕ್ರವಾರ ನಡೆದ ಘಟನೆ ರಾಜ್ಯ ರಾಜಧಾನಿ ಬೆಂಗಳೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ವೈಟ್...

‌ರಾಯಚೂರು | ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ: ಬಿ.ವಿ ನಾಯಕ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ....

ತುಮಕೂರು | ಕಲೆಯ ಗ್ರಹಿಕೆ ಮೇಲೆ ನಿರ್ಬಂಧ ಹೇರುವುದು ಅಪಾಯಕಾರಿ: ವಿಮರ್ಶಕ ರಾಘವೇಂದ್ರರಾವ್

ಕಲೆಯ ಗ್ರಹಿಕೆ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮಬದ್ಧವಾಗಿದ್ದರೂ ನಿರ್ಬಂಧ...

ಗದಗ | ಪ್ರತಿಯೊಬ್ಬರಿಗೂ ಮುಖ್ಯವಾದ ಸಂಪತ್ತು ಆರೋಗ್ಯ; ಎಂಎಲ್‌ಸಿ ಸಂಕನೂರ

ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಮುಖ್ಯವಾದ ಸಂಪತ್ತಾಗಿದೆ. ನೌಕರರು ತಮ್ಮ ಆರೋಗ್ಯ ಸಂರಕ್ಷಣೆಗೆ...