“ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯದಡಿ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜೊತೆ ಜೋಡಣೆ ಮಾಡುವುದು ಸರಿಯಲ್ಲ” ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಗಣೇಶ ರಾಠೋಡ್ ಖಂಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಇಂದು ಮಕ್ಕಳ ದಿನಾಚರಿಸಿ, ಸಿಡಿಪಿ ರಾಘವೇಂದ್ರ ಮ್ಯಾಕಲ್ ಮೂಲಕ ಎರಡೂ ಸಾವಿರ ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳನ್ನು ಖಾಸಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ದತ್ತು ನೀಡುತ್ತಿರುವ ಸರ್ಕಾರದ ತೀರ್ಮಾನವನ್ನು ವಿರೋಧಿಸಿ, ಇದನ್ನು ತಕ್ಷಣ ಹಿಂಪಡೆಯಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಆರು ಸಾವಿರ ಪಂಚಾಯತಿಗಳಲ್ಲಿ ಮೂರು ವಿಭಾಗ ಮಾಡಿದ್ದು, ಮೊದಲ ಹಂತವಾಗಿ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜೋತೆ ಜೋಡಣೆ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ ಸರ್ಕಾರಿ ಶಾಲೆಗೆ ಖಾಸಗಿ ಶಾಲೆಯ ಹೆಸರು ಸೇರಿಸಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿಗಳು ನಮ್ಮ ಶಾಲೆ ನಮ್ಮ ಜವಬ್ದಾರಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಈ ಯೋಜನೆಯನ್ನು ಭಾರತ ವಿದ್ಯಾರ್ಥಿ ಫೇಡರೇಷನ್ (ಎಸ್ ಎಫ್ ಐ) ವಿರೋಧಿಸುತ್ತದೆ” ಎಂದರು.
“ಕರ್ನಾಟಕದಲ್ಲಿ ಸುಮಾರು 47,493 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪಧವಿ ಪೂರ್ವ ಕಾಲೇಜುಗಳಿರುತ್ತವೆ. 309 ಶಾಲೆಗಳು ಎಲ್ ಕೆ ಜಿ ಯಿಂದ 12ನೇ ತರಗತಿಯವರೆಗೆ ಸಂಯುಕ್ತ ವ್ಯವಸ್ಥೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿವೆ” ಎಂದರು.
“ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ (19% ಕಡಿಮೆ) ಕುಸಿದಿರುತ್ತದೆ ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 46% ರಿಂದ 38% ಕ್ಕೆ ಕುಸಿದಿರುತ್ತದೆ. ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26 ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ (29%) ಹೆಚ್ಚಾಗಿದೆ. 2025-26 ನೇ ಸಾಲಿನಲ್ಲಿ 50 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳ ಸಂಖ್ಯೆ 25,683 ಕ್ಕೆ ಏರಿಕೆಯಾಗಿದೆ” ಎಂದರು.
“ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ದಾಖಲಾತಿ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಇರುವುದು ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಹೀಗೆ ಅನೇಕ ಕಾರಣಗಳು ಸಿಗುತ್ತವೆ” ಎಂದರು.
“ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗಾಗಿ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಮುಂದಾಗಿರುವುದು ಖೇಧಕರ. ಸರ್ಕಾರ ವಿಲೀನ ಮಾಡುವ ಕ್ರಮದಿಂದ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ನಾಶವಾಗುತ್ತದೆ” ಎಂದು ಕಿಡಿಕಾರಿದರು.
ನಂತರ ಎಸ್ ಎಫ್ ಐ ನ ಜಿಲ್ಲಾ ಅಧ್ಯಕ್ಷರು ಚಂದ್ರು ರಾಠೋಡ ಮಾತನಾಡಿ, “ಹದಿನಾಲ್ಕು ವಯೋಮಾನದ ಪ್ರತಿ ಮಗುವೂ ತನ್ನ ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೂ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಶಿಕ್ಷಣ ಹಕ್ಕು (RTE) ಖಾಯ್ದೆಯಲ್ಲಿ ಹಾಗೂ ಸಂವಿಧಾನದ ಅನುಚ್ಛೇದ 21 (a)ದ ಹಕ್ಕಾಗಿದೆ. 2000 ಸಾವಿರ ಸರ್ಕಾರಿ ಶಾಲೆ ಖಾಸಗಿ ಜೋಡಣೆಗೆ ಹಾಗೂ ಕೆ ಪಿ ಎಸ್ ಶಾಲೆ ಹೆಸರಿನಲ್ಲಿ ಪಂಚಾಯತಿಗೊಂದು ಸರ್ಕಾರಿ ಶಾಲೆ ತೆರೆದು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸಂವಿಧಾನ ವಿರೋಧಿಯಾಗಿದೆ” ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯಾಧ್ಯಕ್ಷರಾದ ಗಣೇಶ ರಾಠೋಡ, ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ, ಶಿಕ್ಷಣ ಇಲಾಖೆಯ ಸಿಆರ್ ಪಿ ರಾಘವೇಂದ್ರ ಮ್ಯಾಕಲ್, ತಾಲೂಕಾಧ್ಯಕ್ಷ ಅನೀಲ್ ಆರ್, ಕಾರ್ಯದರ್ಶಿ ಶರಣು ಮಾಟರಂಗಿ, ರವಿತೇಜ ಮಾದಿ, ಮೇಘನಾ, ಸಂಗಿತಾ, ಸೌಂದರ್ಯ, ಪ್ರೇರಣ, ಯಲ್ಲಮ್ಮ, ಅಕ್ಕಮಹಾದೇವಿ, ಸುರೇಶ, ಭೀಮಪ್ಪ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.



